

ಗ್ರಾಮಸ್ಥರ ಸಮ್ಮುಖ ಧಾರ್ಮಿಕ ವಿಧಿಗಳಿಗೆ ಚಾಲನೆ
ಮೂಗೂರು : ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮ ನವರ ಜಾತ್ರಾ ಮಹೋತ್ಸವ ಧಾರ್ಮಿಕ ವಿಧಿಗಳಿಗೆ ಶನಿವಾರ ಅಂಕುರಾರ್ಪಣದ ಮೂಲಕ ಚಾಲನೆ ನೀಡಲಾಯಿತು. ನೂರಾರು ಗ್ರಾಮಸ್ಥರ ಸಮ್ಮುಖದಲ್ಲಿ ಕಂಕಣಧಾರಿ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ವಿವಿಧ ಸಮುದಾಯದ ಮುಖಂಡರು, ಭಕ್ತರು ಛತ್ತಿ- ಚಾಮರ ಹಿಡಿದು ಮಂಗಳವಾದ್ಯದೊಂದಿಗೆ ಅಮ್ಮ ನವರ ಆಸ್ಥಾನ ಅಂಕುರಾರ್ಪಣೆಗೆ ಭಕ್ತಿ ಸಮರ್ಪಿಸಿದರು. ಮೂಗೂರು ಗ್ರಾಮದ ಮುಖ್ಯ ರಸ್ತೆಯ ಮೂಲಕ ದೇವಾಲಯಕ್ಕೆ ಅಮ್ಮನವರನ್ನು ಕರೆದೊಯ್ಯುವ ಮಾರ್ಗದ ಉದ್ದಕ್ಕೂ ತಳಿರು- ತೋರಣ, ಬಣ್ಣ ಬಣ್ಣದ ರಂಗೋಲಿ ಚಿತ್ತಾರಗಳು ಕಂಗೊಳಿಸಿದವು.
ಅರ್ಚಕ ಮನೆತನದವರು ಕಂಕಣಧಾರಿ ಅರ್ಚಕರಿಗೆ ದೇಗುಲದ ಬಳಿ ಪಾದಪೂಜೆ ನೆರವೇರಿಸಿ, ಸಂಭ್ರಮ ಸಡಗರದಿಂದ ಗ್ರಾಮದ ದೇವಾಲಯದೊಳಕ್ಕೆ ದೇವಿಯನ್ನು ಬರಮಾಡಿಕೊಂಡರು. ನಂತರ ಮಹಾ ಮಂಗಳಾರತಿ ಮಾಡಲಾಯಿತು. ಭಕ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ದೇವಾಲಯದ ಆವರಣದಲ್ಲಿ ನೂರಾರು ಜನರಿಗೆ ಪ್ರಸಾದ ವಿತರಣೆ ಮಾಡಲಾಯಿತು.