

ಬೆಂಗಳೂರು: ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್) ಆವರಣದಲ್ಲಿ ಮೂರು ದಿನಗಳಿಂದ ನಡೆದಿದ್ದ ‘ತ್ರಿಫಲ ವೈವಿಧ್ಯ ಮೇಳ’ ಫಲಪ್ರದಗೊಂಡು ಭಾನುವಾರ ಅದ್ದೂರಿ ಸಂಪನ್ನಗೊಂಡಿತು.
ಮೇಳದಲ್ಲಿ 10,000ಕ್ಕೂ ಹೆಚ್ಚು ಹಣ್ಣು ಪ್ರಿಯರು ಭೌತಿಕವಾಗಿ ಭಾಗವಹಿಸಿದ್ದರೆ, ಸಾಮಾಜಿಕ ಮಾಧ್ಯಮದ ಮೂಲಕ 20,000ಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದುಕೊಂಡರು. ಮೇಳ ಆಯೋಜಿಸಿದ್ದರಿಂದ ಮಾವು, ಹಲವು ಹಾಗೂ ಬಾಳೆ ತಳಿಗಳ ಬಗ್ಗೆ ರೈತರು, ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡಿದ್ದು, ಬೆಳೆಗಳನ್ನು ಬೆಳೆಯುವಲ್ಲಿ ಆಸಕ್ತಿ ತೋರಿಸಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಸಮಾರೋಪದಲ್ಲಿ ಮಾತನಾಡಿದ ಕೇಂದ್ರೀಯ ತೆರಿಗೆ ಇಲಾಖೆಯ ಬೆಂಗಳೂರು ವಿಭಾಗದ ನಿವೃತ್ತ ಪ್ರಧಾನ ಕಮಿಷನರ್ ಜಿ. ನಾರಾಯಣಸ್ವಾಮಿ, ದೇಶದ ಆಹಾರ ಸ್ವಾವಲಂಬನೆಯಲ್ಲಿ ಕೃಷಿ ವಿಜ್ಞಾನಿಗಳ ಪಾತ್ರ ಅವಿಸ್ಮರಣೀಯ. ಆಹಾರ ಭದ್ರತೆಯೊಂದಿಗೆ ಪೋಷಣ ಭದ್ರತೆಯಲ್ಲಿಯೂ ಕೂಡ ತೋಟಗಾರಿಕೆ ಉತ್ಪನ್ನಗಳು ಸಹಕಾರಿಯಾಗಿವೆ. ಇಂತಹ ರೈತ ಮಿತ್ರ ಕಾರ್ಯಕ್ರಮವನ್ನು ಸಂಘಟಿಸಿದ ಸಂಸ್ಥೆ ಉತ್ತಮ ಕೆಲಸ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರಿನ ಕೃಷಿ ಅನ್ವಯಿಕ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ವೆಂಕಟಸುಬ್ರಹ್ಮಣ್ಯಂ ಮಾತನಾಡಿ, ಭಾರತ ದೇಶವು ವೈವಿಧ್ಯತೆಯಿಂದ ಸಮೃದ್ಧವಾಗಿದೆ. ಈ ಹಣ್ಣಿನ ಬೆಳೆಗಳ ವೈವಿಧ್ಯತೆ ಮೇಳವು ಜನರ ಜ್ಞಾನ ವೃದ್ದಿಯೊಂದಿಗೆ ಹಣ್ಣಿನ ಹೊಸ ತಳಿಗಳು ಮತ್ತು ಅವುಗಳ ಉಪ ಉತ್ಪನ್ನಗಳ ಮೂಲಕ ರೈತರು ಮತ್ತು ರೈತ ಮಹಿಳೆಯರ ಆದಾಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಬಹುಮಾನ ವಿತರಣೆ:
ಇದೇ ವೇಳೆ ಮೇಳದಲ್ಲಿ ನಡೆಸಿದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತ ಶಾಲಾ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು. ಅಲ್ಲದೆ 3 ಹಣ್ಣಿನ ವಿವಿಧ ಬಗೆಗಳ ಆದ್ಯ ತಯಾರಿಕೆ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಿಗಳಿಗೂ ಬಹುಮಾನ ವಿತರಿಸಲಾಯಿತು. ವಿವಿಧ ಹಣ್ಣಿನ ತಳಿಗಳನ್ನು ಸಂರಕ್ಷಿಸಿದ ಅನ್ನದಾತರಿಗೆ ‘ತಳಿ ಸಂರಕ್ಷಕ ರೈತ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಸಮಾರೋಪದಲ್ಲಿ ಮೇಳದ ಸಂಘಟನಾ ಕಾರ್ಯದರ್ಶಿ ಡಾ. ಎನ್. ಶಂಕರನ್, ತಿರುಚನಪಾಳ್ಯ ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಸೆಲ್ವರಾಜನ್, ತಮಿಳುನಾಡು ಕೃಷಿ ವಿವಿಯ ಹಣ್ಣಿನ ಬೆಳೆಗಳ ಮುಖ್ಯಸ್ಥೆ ಡಾ. ಜಾಹ್ನವಿ ಹಾಗೂ ಇತರ ವಿಜ್ಞಾನಿಗಳು ಭಾಗವಹಿಸಿದ್ದರು.
ತ್ರಿಫಲ ವೈವಿಧ್ಯ ಮೇಳವು ಪಟ್ಟಣದ ಜನರಿಗೆ ಹಳ್ಳಿಯ ರೈತರ ತೋಟಗಳ ತಾಜಾ ಹಣ್ಣುಗಳನ್ನು ನೇರವಾಗಿ ಒದಗಿಸಲು ಅವಕಾಶ ಕಲ್ಪಿಸಿದೆ. ಸಂಸ್ಥೆಯ ವಿಜ್ಞಾನಿಗಳಿಂದ ಸಿದ್ಧಪಡಿಸಿರುವ ಹೊಸ ತಳಿಗಳನ್ನು ರೈತರಿಗೆ ತಿಳಿಸಲು ಸೂಕ್ತ ವೇದಿಕೆ ದೊರೆತಂತಾಯಿತು.
- ಡಾ. ಪ್ರಕಾಶ್ ಪಾಟೀಲ್, ಐಐಎಚ್‌ಆರ್ ನಿರ್ದೇಶಕ