ತ್ರಿಫಲ ವೈವಿಧ್ಯ ಹಣ್ಣುಗಳ ಮೇಳಕ್ಕೆ ಚಾಲನೆ

Fruit mela - 2
Published on

ಬೆಂಗಳೂರು: ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ‘ತ್ರಿಫಲ ವೈವಿಧ್ಯ’ ಶೀರ್ಷಿಕೆಯಡಿ ಆಯೋಜಿಸಿರುವ ಮೂರು ದಿನಗಳ ಮಾವು, ಹಲಸು ಮತ್ತು ಬಾಳೆ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ತಮಿಳುನಾಡಿನ ತಿರುಚ್ಚಿಯ ರಾಷ್ಟ್ರೀಯ ಬಾಳೆಹಣ್ಣು ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಮೂರು ದಿನಗಳ ಈ ಪ್ರದರ್ಶನದಲ್ಲಿ ಅಧಿಕ ನಾರಿನ ಅಂಶವುಳ್ಳ ಸುಮಾರು 300 ಬಗೆಯ ಮಾವು, 100 ಹಲಸು ಮತ್ತು 100 ಬಾಳೆ ಹಣ್ಣುಗಳ ವೈವಿಧ್ಯತೆಯನ್ನು ಕಾಣಬಹುದಾಗಿದೆ.

ಮೇಳ ಉದ್ಘಾಟಿಸಿದ ಹೊಸ ದೆಹಲಿಯ ಐಸಿಎಆರ್ (ತೋಟಗಾರಿಕಾ ವಿಜ್ಞಾನ) ಡಿಡಿಜಿ ಡಾ. ಸಂಜಯ್‌ಕುಮಾರ್ ಸಿಂಗ್ ಮಾತನಾಡಿ, ರೈತರ ಜೀವನೋಪಾಯದಲ್ಲಿ ಮಾವು, ಹಲಸು ಮತ್ತು ಬಾಳೆಹಣ್ಣು ಪ್ರಮುಖ ಪಾತ್ರ ವಹಿಸಿವೆ. ಭಾರತದಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆಯ ಹಲವು ಮೈಲುಗಲ್ಲುಗಳನ್ನು ಸಾಧಿಸಲು ವೈವಿಧ್ಯತೆಯು ಪ್ರಮುಖ ಅಂಶವಾಗಿದೆ ಎಂದರು.

ಯುವಕರನ್ನು ತೋಟಗಾರಿಕಾ ಬೆಳೆಗಳ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುವುದು ಮತ್ತು ಸುಗ್ಗಿ ನಂತರದ ನಿರ್ವಹಣೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ವಿಸ್ತೃತ ಚಟುವಟಿಕೆಗಳು ಹಣ್ಣಿನ ರ್ತು ಮತ್ತು ಆದಾಯ ಉತ್ಪಾದನೆಯಲ್ಲಿ ಸಂಭಾವ್ಯ ಏರಿಕೆಗೆ ಕಾರಣವಾಗುತ್ತವೆ. ಅವರು ವಿಶೇಷವಾಗಿ ಅಧ್ಯಾಪಕರ ವಿನಿಮಯಕ್ಕಾಗಿ ಆಸ್ಟ್ರೇಲಿಯಾ ಕೌನ್ಸಿಲ್‌ನೊಂದಿಗೆ ಮತ್ತು ಕೌನ್ಸಿಲ್‌ನ ಔಟ್‌ರೀಚ್ ಶೈಕ್ಷಣಿಕ ಕಾರ್ಯಕ್ರಮಗಳ ಭಾಗವಾಗಿ ಅಂತಾರಾಷ್ಟ್ರೀಯ ಸಹಯೋಗಗಳಿಗೆ ಒತ್ತು ನೀಡಬೇಕು ಎಂದು ಹೇಳಿದರು.

ಐಎಎಚ್‌ಆರ್ ನಿರ್ದೇಶಕ ಡಾ. ಪ್ರಕಾಶ ಪಾಟೀಲ ಮಾತನಾಡಿ, ರೈತರ, ಖಾಸಗಿ ಮಧ್ಯಸ್ಥಗಾರರು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಸಂಭಾವ್ಯ ಸಹಯೋಗ, ವಿನಿಮಯ ಮತ್ತು ಉತ್ಪಾದನೆಯ ಸುಧಾರಣೆ ಮತ್ತು ಆರ್ಥಿಕ ಆದಾಯಕ್ಕಾಗಿ ಉತ್ತಮ ಲಿತಾಂಶ ನಿರೀಕ್ಷಿಸಲು ಮತ್ತು ಮೌಲ್ಯ ಸರಪಳಿಯನ್ನು ಸುಧಾರಿಸಲು ಮೇಳ ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಲೋ ಫ್ಯಾಟ್ ಬಾಳೆಹಣ್ಣಿನ ಚಿಪ್ಸ್ ಬಿಡುಗಡೆ ಮಾಡಲಾಯಿತು. ಮಾವು, ಹಲಸು ಮತ್ತು ಬಾಳೆ ಜೀನೋಟೈಪ್‌ಗಳನ್ನು ಸಂರಕ್ಷಿಸುವಲ್ಲಿ ಶ್ರಮಿಸಿದ ಏಳು ರೈತರಿಗೆ ‘ಸಂರಕ್ಷಣಾ ರೈತ ಪ್ರಶಸ್ತಿ’ ನೀಡಿ ಪುರಸ್ಕರಿಸಲಾಯಿತು. ಎರಡು ಒಪ್ಪಂದಗಳಿಗೆ ಸಹಿ ಮಾಡಲಾಯಿತು. ರೈತರು, ಮಕ್ಕಳು, ವಿಜ್ಞಾನಿಗಳೂ ಸೇರಿ ಹಲವರು ಮೇಳ ವೀಕ್ಷಿಸಿ ಹೊಸ ತಳಿಗಳ ಬಗ್ಗೆ ಮಾಹಿತಿ ಪಡೆದರು.

ತಮಿಳುನಾಡಿನ ತಿರುಚ್ಚಿಯ ಬಾಳೆಹಣ್ಣು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಆರ್. ಸೆಲ್ವರಾಜನ್, ಆಸ್ಟ್ರೇಲಿಯಾದ ಕಾನ್ಸುಲೇಟ್ ಹ್ಯಾರಿಯೆಟ್ ವೈಟ್, ಪ್ರದರ್ಶನದ ಸಂಘಟನಾ ಕಾರ್ಯದರ್ಶಿ ಡಾ. ಎಂ. ಶಂಕರನ್, ಎಸ್‌ಪಿಎಚ್‌ನ ಅಧ್ಯಕ್ಷೆ ಡಾ. ಮಾಧವಿರೆಡ್ಡಿ, ಐಐಎಚ್‌ಆರ್‌ನ ನಂದೀಶ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net