ಕೃಷಿ ಹೊಂಡಗಳ ನಿರ್ಮಾಣಕ್ಕೆ ತ್ರಿಪಕ್ಷೀಯ ಒಪ್ಪಂದ

5 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೃಷಿ ಹೊಂಡಗಳನ್ನು ನಿರ್ಮಿಸುವ ಮೂಲಕ ರೈತರ ಬದುಕು ಪರಿವರ್ತಿಸುವ ಉದ್ದೇಶದಿಂದ ನಬಾರ್ಡ್, ದೇಶಪಾಂಡೆ ಪ್ರತಿಷ್ಠಾನ ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ತ್ರಿಪಕ್ಷೀಯ ತಿಳಿವಳಿಕಾ ಒಪ್ಪಂದಕ್ಕೆ ಸಹಿ ಮಾಡಿವೆ.
ತ್ರಿಪಕ್ಷೀಯ ತಿಳಿವಳಿಕಾ ಒಪ್ಪಂದದ ಪ್ರಕಾರ, ಜಂಟಿ ಹೊಣೆಗಾರಿಕೆ ಗುಂಪುಗಳ (ಜೆಎಲ್‌ಜಿ) ರಚನೆ ಮತ್ತು ಕ್ರೆಡಿಟ್ ಲಿಂಕ್ ಮೂಲಕ ಬೆಳಗಾವಿ ಮತ್ತು ಗದಗ ಜಿಲ್ಲೆಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಲಾಗುತ್ತದೆ. ಒಪ್ಪಂದದ ಅನ್ವಯ ದೇಶಪಾಂಡೆ ಪ್ರತಿಷ್ಠಾನ ಜೆಎಲ್‌ಜಿ ರಚಿಸಿ ಕೃಷಿ ಹೊಂಡಗಳನ್ನು ವೈಜ್ಞಾನಿಕವಾಗಿ ನಿರ್ಮಿಸುತ್ತದೆ. ಜಂಟಿ ಹೊಣೆಗಾರಿಕೆ ಗುಂಪುಗಳನ್ನು ಸ್ಥಾಪಿಸಲು ಮತ್ತು ಬೆಂಬಲಿಸಲು ನಬಾರ್ಡ್ ಪ್ರೋತ್ಸಾಹ ಧನ ನೀಡುತ್ತದೆ. ಪ್ರತಿಯಾಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕೃಷಿ ಹೊಂಡಗಳ ನಿರ್ಮಾಣಕ್ಕೆ ಜಂಟಿ ಹೊಣೆಗಾರಿಕೆ ಗುಂಪುಗಳಿಗೆ ಸಾಂಸ್ಥಿಕ ಹಣಕಾಸು ಒದಗಿಸುತ್ತದೆ.
ಬ್ಯಾಂಕಿನ ಅಧ್ಯಕ್ಷ ಶ್ರೀಕಾಂತ ಭಂಡಿವಾಡ ಮಾತನಾಡಿ, ಉತ್ತರ ಕರ್ನಾಟಕದ ಬಹುತೇಕ ಭಾಗಗಳು ಮಳೆಯನ್ನೇ ಅವಲಂಬಿಸಿವೆ. ಮಳೆ ಬರದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆದ ಬೆಳೆಗಳನ್ನು ರಕ್ಷಿಸಲು ರೈತರು ಕೃಷಿ ಹೊಂಡಗಳ ಮೊರೆ ಹೋಗುವಂತೆ ಪ್ರೇರೇಪಿಸುವ ಜತೆಗೆ ತರಕಾರಿ ಬೆಳೆಗಳಂತೆ ಬೇಗ ಫಲ ಕೊಡುವ ಕೃಷಿ ಕೈಗೊಂಡು ಆದಾಯ ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆ ಕೈಗೊಳ್ಳಲಾಗಿದೆ. ಸಂದಿಗ್ಧ ಸಂದರ್ಭದಲ್ಲಿ ಜಾನುವಾರುಗಳಿಗೆ ಮೇವು ಬೆಳೆದುಕೊಳ್ಳಲೂ ಕೃಷಿ ಹೊಂಡಗಳು ಪೂರಕವಗಲಿವೆ. ದೇಶಪಾಂಡೆ ಫೌಂಡೇಶನ್‌ಗೆ ಈ ವಿಷಯದಲ್ಲಿ ಅನುಭವ ಇರುವುದರಿಂದ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.
ಕೆವಿಜಿ ಬ್ಯಾಂಕ್ ಮಹಾ ಪ್ರಬಂಧಕ ಆರ್.ಟಿ. ಕಾಂಬಳೆ, ದೇಶಪಾಂಡೆ ಪ್ರತಿಷ್ಠಾನ ಸಿಇಒ ಆನಂದ್ ಬರಿಯಾ, ನಬಾರ್ಡಿನ ಜಿಲ್ಲಾ ಅಭಿವೃದ್ಧಿ ಪ್ರಬಂಧಕ ಮಯೂರ ಕಾಂಬಳೆ, ಹಿರಿಯ ಅಧಿಕಾರಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net