ಗೀತಾಧ್ಯಯನದಿಂದ ಪುಣ್ಯಪ್ರಾಪ್ತಿ: ಕಂಚಿಶ್ರೀ

udp-20-geethostava
Published on

ಉಡುಪಿ: ವಿಶ್ವಶಾಂತಿಗಾಗಿ ಸನಾತನ ಧರ್ಮ ಉನ್ನತಿ ಅತೀ ಅಗತ್ಯವಾಗಿದ್ದು, ಇದರಲ್ಲಿರುವ ವಿಜ್ಞಾನ ಸಂಸತಿ, ವಿಕಸನ ಸಂಸತಿ ಬೇರೆ ಎಲ್ಲೂ ಕಾಣಲು ಸಾಧ್ಯವಿಲ್ಲ. ಗೀತೆ ಲೇಖನದಿಂದ ಶ್ಲೋಕಗಳು ಮನಸ್ಸಿನಲ್ಲಿ ಧಾರಣೆಯಾಗಿ ಪುಣ್ಯಪ್ರಾಪ್ತಿಯಾಗುತ್ತದೆ ಎಂದು ಕಂಚಿ ಕಾಮಕೋಟಿ ಮೂಲಾಮ್ನಾಯ ಸರ್ವಜ್ಞ ಪೀಠದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಶ್ರೀಪಾದರು ಹೇಳಿದರು.

ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಕೋಟಿ ಗೀತಾ ಲೇಖನ ಯಜ್ಞದ ಅಂಗವಾಗಿ ನ.20ರಿಂದ ಡಿ.29ರವರೆಗೆ ನಡೆಯುವ ತ್ರಿಪಕ್ಷ ಶತವೈಭವ ಬೃಹತ್​ ಗೀತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಪ್ರತಿ ಮನೆಯಲ್ಲೂ ಗೀತೆಯ ಪ್ರವೇಶವಾಗಬೇಕು. ಇದರಿಂದ ಸಂಪ್ರದಾಯದ ಪ್ರಚಾರದ ಜೊತೆಗೆ ಸುಖ,ಶಾಂತಿ, ಆರೋಗ್ಯ ವೃದ್ಧಿಯಾಗುತ್ತದೆ. ಸಮಾಜಕ್ಕೂ ಒಲಿತಾಗುತ್ತದೆ. ಧಾರ್ಮಿಕ ಸಮಾಜವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ದೇವಾಲಯಗಳಲ್ಲಿ ವೇದಾಧ್ಯಯನ ನಡೆಯಬೇಕು. ದೇವಸ್ಥಾನಗಳು ಚೈತನ್ಯಪೂರ್ಣವಾಗಿ, ಪವಿತ್ರವಾಗಿರಬೇಕು. ಉಡುಪಿ ಕ್ಷೇತ್ರದಲ್ಲಿ ಅನೇಕ ಧಾರ್ಮಿಕ ಮತ್ತು ಲೌಕಿಕ ಲೋಕ ಕಲ್ಯಾಣ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾನೀಯ ಎಂದರು.

ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತಿರ್ಥ ಶ್ರೀಪಾದರು ಮಾತನಾಡಿ, ಭಾರತ ವಿಶ್ವಗುರುವಾಗಲು ಆರ್ಥಿಕ ವಿಷಯ ಮಾತ್ರವಲ್ಲದೆ ಪಾರಮಾರ್ಥಿಕ ಚಿಂತನೆಯೂ ಮುಖ್ಯ. ಜಗದಗಲದಲ್ಲಿ ಗೀತೆ ಸಂದೇಶ ವ್ಯಾಪಿಸಿದಾಗ ದೇಶ ವಿಶ್ವಗುರು ಸ್ಥಾನ ತಲುಪಲು ಸಾಧ್ಯ. ಈ ನಿಟ್ಟಿನಲ್ಲಿ ವಿಶ್ವಮಾನ್ಯ ಗೀತೆ ಸಂದೇಶ ಪ್ರತಿ ಮನೆ&ಮನಗಳಲ್ಲಿ ಪ್ರತಿಷ್ಠಾಪಿಸಬೇಕು. ಗೀತೆಯ ಮೂಲಕ ಕೃಷ್ಣನ ಆರಾಧನೆ ಸಂಕಲ್ಪ ಮಾಡಿದ್ದೇವೆ ಎಂದರು. ಆಚಾರ್ಯ ತ್ರಯರು ಕೂಡ ಗೀತೆಗೆ ಪ್ರಸ್ಥಾನದ ಸ್ಥಾನ ನೀಡಿದ್ದಾರೆ. ಹೀಗಾಗಿ ಗೀತೆ ವೈದಿಕ ಮತ್ತು ಲೌಕಿಕ ದೃಷ್ಟಿಯಿಂದಲೂ ಶ್ರೇಷ್ಠವಾಗಿದೆ. ಗೀತೆಯ ಜ್ಞಾನದಿಂದ ಜೀವನ ಉತ್ಸಾಹಮಯವಾಗಲು ಸಾಧ್ಯ ಎಂದರು.

ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಯಶಪಾಲ ಸುವರ್ಣ, ಗುರುರಾಜ ಗಂಟಿಹೋಳಿ, ಹೊರನಾಡು ಶ್ರೀ ಕ್ಷೇತ್ರ ಧರ್ಮದರ್ಶಿ ಡಾ. ಜಿ. ಭೀಮೇಶ್ವರ ಜೋಶಿ, ಕಟೀಲು ಹರಿ ನಾರಾಯಣ ಅಸ್ರಣ್ಣ, ಡಾ.ನಿ.ಬಿ ವಿಜಯ ಬಲ್ಲಾಳ್​, ವಿದ್ವಾನ್​ ಸೂರ್ಯನಾರಾಯಣ ಉಪಾಧ್ಯಾಯ, ವಿಶ್ವ ಹಿಂದು ಪರಿಷತ್​ ಪ್ರಾಂತೀಯ ಅಧ್ಯಕ್ಷ ಎಂ.ಬಿ ಪುರಾಣಿಕ್​, ಉದ್ಯಮಿ ಭುವನೇಂದ್ರ ಕಿದಿಯೂರು, ಲೇಖಕ ರೋಹಿತ್​ ಚಕ್ರತಿರ್ಥ, ಪ್ರಮುಖರಾದ ಪ್ರದಿಪ್​ ಕಲ್ಕೂರ, ಭುವನಾಭಿರಾಮ ಉಡುಪ, ಹರಿಕೃಷ್ಣ ಪುನರೂರು, ದಿವಾನ್​ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಭಾಗವಹಿಸಿದ್ದರು. ವಿದ್ವಾನ್​ ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net