

ಮಂಡ್ಯ: ಮಳೆ ಕೊರತೆಯಿಂದ ನೀರಿಲ್ಲದೆ ಸಂಕಷ್ಟ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾತುಕತೆ ಮೂಲಕ ಪರಿಹಾರ ಸೂಚಿಸಬೇಕು. ಅಂತೆಯೇ ರೈತರ ಹಿತ ಕಾಪಾಡಲು ಮಠಾಧೀಶರು ದೆಹಲಿಗೆ ಬರಲು ಸಿದ್ಧರಿದ್ದೇವೆ. ರೈತರ ಋಣ ನಮ್ಮಗಳ ಮೇಲಿದೆ. ಆದ್ದರಿಂದ ಪ್ರಧಾನಿ ಭೇಟಿ ಮಾಡಿ ನ್ಯಾಯ ಕೋರಲು ಸಿದ್ಧರಾದರೆ ನಿಮ್ಮೊಂದಿಗೆ ಮಠಾಧೀಶರು ಬರಲಿದ್ದೇವೆ ರಾಜ್ಯಸರ್ಕಾರಕ್ಕೆ ಬೇಬಿ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಹೇಳಿದರು.
ನಗರದ ಸರ್‌ಎಂವಿ ಪ್ರತಿಮೆ ಎದುರು ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಮಾತನಾಡಿದ ಅವರು, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸಂಕಷ್ಟ ಸನ್ನಿವೇಶ ಸೃಷ್ಟಿಯಾಗಿರುವುದರಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿ ನ್ಯಾಯ ದೊರಕಿಸಿಕೊಡಲು ಮುಂದಾಗಬೇಕು ಒತ್ತಾಯಿಸಿದರು.
ಕಾವೇರಿ ಕನ್ನಡ ನಾಡಿನ ಜೀವನದಿ. ಪ್ರತಿಯೊಬ್ಬರೂ ಬದುಕಲು ನೀರು ಬೇಕು. ಬ್ರಿಟಿಷರ ಕಾಲದಲ್ಲಿ ಆದ ಕಾವೇರಿ ಒಪ್ಪಂದ ತಿದ್ದುಪಡಿ ಆಗದೇ ಇರುವುದು ನಾಚಿಕೆಗೇಡು. ನೆಲ ಜಲ ಉಳಿಸಲು ಸಂವಿಧಾನ ಬದ್ಧವಾಗಿ ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ ಅವರು, ಸಂಕಷ್ಟದ ಸ್ಥಿತಿಯಲ್ಲಿ ವಾಸ್ತವ ಪರಿಸ್ಥಿತಿಯನ್ನು ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡಲು ರಾಜ್ಯ ಸರ್ಕಾರ ವಿಫಲವಾಗಿದೆ. ನ್ಯಾಯಾಲಯಗಳಲ್ಲಿ ಸಾಕ್ಷಿ ಆಧಾರದಂತೆ ತೀರ್ಮಾನ ಮಾಡುತ್ತಾರೆ. ಮಳೆಯ ಕೊರತೆ ಎದುರಾಗುವ ಬಗ್ಗೆ ಹವಾಮಾನ ಇಲಾಖೆಯಿಂದ ವರದಿ ಪಡೆದು ಮುನ್ನೆಚ್ಚರಿಕೆ ವಹಿಸಬಹುದಾಗಿತ್ತು ಅಷ್ಟೇ. ಅಲ್ಲದೆ ಕೆರೆ ಕಟ್ಟೆ, ಕಾಲುವೆಗಳಿಗೆ ನೀರು ಹರಿಸಿ ಬೆಳೆಯನ್ನು ಉಳಿಸಬಹುದಿತ್ತು. ಅದನ್ನು ಸಹ ಮಾಡಲಿಲ್ಲ ಎಂದು ತಿಳಿಸಿದರು.
ಜನಪ್ರತಿನಿಧಿಗಳು ಜನಸೇವಕರು. ಆದರೆ ಇವರು ಚುನಾವಣೆ ಸಮಯದಲ್ಲಿ ಮಾತ್ರ ಸೇವಕರಾಗುತ್ತಾರೆ. ಅನಂತರ ಮಹಾರಾಜರಾಗುತ್ತಿದ್ದಾರೆ. ಅಧಿಕಾರ ಕೊಟ್ಟರೂ ಸಹ ಸಮಸ್ಯೆಯನ್ನು ಬಗೆಹರಿಸದೆ ಜನಗಳನ್ನು ಬೀದಿಗೆ ನಿಲ್ಲಿಸಿದ್ದಾರೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಾಚಿಕೆಗೇಡಿನ ವಿಚಾರ. ರಾಜ್ಯದ ಹಿತ ಕಾಪಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಕಾವೇರಿ ನೀರಿನ ವಿಚಾರದಲ್ಲಿ ತೊಂದರೆಯಾಗುತ್ತಿರುವ ಲೋಪ ದೋಷಗಳನ್ನು ಸರಿಪಡಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸ ಬೇಕಾಗಿದೆ ಎಂದು ಸಲಹೆ ನೀಡಿದರು.
ಹೋರಾಟದ ಕಿಚ್ಚು ಹೊತ್ತಿ ಉರಿದರೆ ನಿಮ್ಮಗಳಿಗೆ ಉಳಿಗಾಲ ಇಲ್ಲ. ರೈತರ ಶಾಪ, ರೈತರ ಕಣ್ಣೀರು ಒಳ್ಳೆಯದಲ್ಲ. ಸ್ವಾತಂತ್ರ್ಯ ಬಂದರೂ ರೈತರು ಅತಂತ್ರರಾಗಿದ್ದಾರೆ. ಇದುವರೆಗೂ ರೈತರು ಬಲಿಷ್ಠವಾಗಿಲ್ಲ. ಬದಲಿಗೆ ಐಟಿ ಬಿಟಿ ಕ್ಷೇತ್ರ ಬಲಿಷ್ಠ ಮಾಡಲಾಗಿದ್ದು, ಅವರು ಐದಾರು ವರ್ಷದಲ್ಲಿ ಮನೆ, ಕಾರು ಖರೀದಿಸುವ ಮಟ್ಟಿಗೆ ಸಬಲರಾಗುತ್ತಾರೆ. ಆದರೆ ರೈತರು ಸ್ಕೂಟರ್ ಖರೀದಿಸಲು ಸಾಧ್ಯವಾಗುತ್ತಿಲ್ಲ. ಬದಲಾಗಿ ಸಾಲ ತೀರಿಸಲು ತಿಣಕಾಡುತ್ತಾರೆ. ಅಂತಹ ಪರಿಸ್ಥಿತಿಯನ್ನು ಆಳುವ ಸರ್ಕಾರಗಳು ಸೃಷ್ಟಿಸುತ್ತಿವೆ. ರೈತರು ಎದ್ದು ನಿಂತು ಹೋರಾಡುವ ತನಕ ಜೀವನ ಬಲಿಷ್ಠವಾಗಲು ಸಾಧ್ಯವಾಗದು. ಹಾಗಾಗಿ ಸ್ವಾಭಿಮಾನದ ಬದುಕಿನ ಜತೆಗೆ ಹೋರಾಟವು ಸಹ ಅಗತ್ಯ ಎಂದರು.
ಹುಲಿಕಲ್ ನಟರಾಜು ಮಾತನಾಡಿ, ಸಿಂಧೂ ನದಿಯ ದಡದಲ್ಲಿ ನಮ್ಮ ನಾಗರಿಕತೆ ಪ್ರಾರಂಭವಾಯಿತು. ಪ್ರಕೃತಿ ನಮಗೆಂದಿಗೂ ಅನ್ಯಾಯ ಮಾಡಿಲ್ಲ. ಆದರೆ ನಮ್ಮ ದುರಾಸೆಯಿಂದ ರೆಸಾರ್ಟ್ ನಿರ್ಮಾಣ, ಗಣಿಗಾರಿಕೆ, ಕಾಡುಗಳ ನಾಶ ಮಾಡಿದ್ದರಿಂದ ಇನ್ನು ಕಾಲ ಕಾಲಕ್ಕೆ ಮಳೆಯಾಗುತ್ತಿಲ್ಲ. ಹಾಗಾಗಿ ನಾವು ನೆಲ, ಜಲ ಉಳಿಸಿಕೊಳ್ಳಲು ಒಟ್ಟುಗೂಡಬೇಕಿದೆ ಎಂದರು.