

ಸದೇಶ್ ಕಾರ್ಮಾಡ್ ಮೈಸೂರು
ಟ್ರಿಣ್ ಟ್ರಿಣ್ ಪಬ್ಲಿಕ್ ಬೈಸಿಕಲ್ ಷೇರಿಂಗ್ ಯೋಜನೆಯನ್ನು 6 ವರ್ಷಗಳ ಹಿಂದೆ ದೇಶದಲ್ಲಿ ಪ್ರಥಮ ಬಾರಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರಾರಂಭಿಸಲಾಯಿತು. ಯೋಜನೆಯನ್ನು ಆಧುನೀಕರಣಗೊಳಿಸುವ ಸಲುವಾಗಿ ತಾತ್ಕಾಲಿಕವಾಗಿ ಬೈಸಿಕಲ್ ಸೇವೆ ಸ್ಥಗಿತಗೊಳಿಸಲಾಗಿದ್ದು, ಶೀಘ್ರದಲ್ಲಿಯೇ ಹೊಸ ಬೈಸಿಕಲ್‌ಗಳು ರಸ್ತೆಗೆ ಇಳಿಯಲಿವೆ.
ಬೈಸಿಕಲ್ ಬಳಕೆಯನ್ನು ಜನಪ್ರಿಯಗೊಳಿಸುವ ಸಲುವಾಗಿ ನಗರ ಪಾಲಿಕೆಯು ನಗರದಲ್ಲಿ ‘ಟ್ರಿಣ್ ಟ್ರಿಣ್ ಪಬ್ಲಿಕ್ ಬೈಸಿಕಲ್ ಷೇರಿಂಗ್’ ಯೋಜನೆ ಪ್ರಾರಂಭಿಸಿತು. 4 ಜೂನ್ 2017 ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಬೈಸಿಕಲ್ ಸೇವೆಗೆ ಚಾಲನೆ ನೀಡಿದ್ದರು.
‘ಗ್ರೀನ್ ವೀಲ್ ರೈಡ್’ ಸಂಸ್ಥೆಯು ‘ಟ್ರಿಣ್ ಟ್ರಿಣ್ ಪಬ್ಲಿಕ್ ಬೈಸಿಕಲ್ ಷೇರಿಂಗ್’ ಯೋಜನೆಯ ಜವಾಬ್ದಾರಿ ಹೊತ್ತುಕೊಂಡು ಯಶಸ್ವಿಯಾಗಿ ಮುನ್ನಡೆಸಿತು. ಹೀಗಾಗಿ ಯೋಜನೆಯು ಯಶಸ್ವಿಯಾಗಿ ಐದು ವರ್ಷಗಳನ್ನು ಪೂರೈಸಿತು. ಬೈಸಿಕಲ್ ಬಳಕೆಗೆ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ನಗರ ಪಾಲಿಕೆಯು ‘ಟ್ರಿಣ್ ಟ್ರಿಣ್ ಪಬ್ಲಿಕ್ ಬೈಸಿಕಲ್ ಷೇರಿಂಗ್’ ಯೋಜನೆಯನ್ನು ಆಧುನೀಕರಣ ಗೊಳಿಸಲು ನಿರ್ಧರಿಸಿ ಹೊಸದಾಗಿ ಟೆಂಡರ್ ಕರೆದು ಕಾರ್ಯಾದೇಶ ನೀಡಿದೆ. ಇದೀಗ ನಗರದಲ್ಲಿ ಹೊಸ ಬೈಸಿಕಲ್ ಸೇವೆ ಒದಗಿಸಲು ಬೇಕಾದ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ನಗರದಲ್ಲಿದ್ದ ಎಲ್ಲ ಹಳೆಯ ಬೈಸಿಕಲ್‌ಗಳನ್ನು ನಗರ ಪಾಲಿಕೆಯು ಹಿಂಪಡೆದಿದ್ದು, ಆ ಜಾಗಕ್ಕೆ ಹೊಸ ಎಲೆಕ್ಟ್ರಿಕಲ್ ಸೈಕಲ್‌ಗಳು ಬರಲಿವೆ. ‘ಗ್ರೀನ್ ವೀಲ್ ರೈಡ್’ ಸಂಸ್ಥೆಯೊಂದಿಗೆ ನಗರ ಪಾಲಿಕೆ ಮಾಡಿಕೊಂಡ ಒಡಂಬಡಿಕೆ ಡಿಸೆಂಬರ್‌ಗೆ ಅಂತ್ಯಗೊಂಡಿತ್ತು. ಹೊಸದಾಗಿ ಟೆಂಡರ್ ಪಡೆದುಕೊಂಡ ಸಂಸ್ಥೆಯು ಬೈಸಿಕಲ್ ಸೇವೆ ಪ್ರಾರಂಭಿಸಲು ಮತ್ತಷ್ಟು ಕಾಲಾವಕಾಶ ಬೇಕೆಂದು ಕೇಳಿಕೊಂಡ ಹಿನ್ನೆಲೆಯಲ್ಲಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ‘ಗ್ರೀನ್ ವೀಲ್ ರೈಡ್’ ಸಂಸ್ಥೆಯು ಬೈಸಿಕಲ್ ಸೇವೆಯನ್ನು ಮಾ.21ರವರೆಗೆ ನೀಡಿತ್ತು. ಇದೀಗ ಹೊಸ ಬೈಸಿಕಲ್‌ಅನ್ನು ಸಾರ್ವಜನಿಕ ಸೇವೆಗೆ ಒದಗಿಸಲು ಬೇಕಾದ ಸಿದ್ಧತೆಗಳನ್ನು ಪ್ರಾರಂಭಿಸಲಾಗಿದೆ.
ಪ್ರಸ್ತುತ ನಗರದಲ್ಲಿ 450 ಬೈಸಿಕಲ್ ಹಾಗೂ 48 ನಿಲ್ದಾಣಗಳು ಇವೆ. ಇದನ್ನು 1000 ಬೈಸಿಕಲ್, 100 ನಿಲ್ದಾಣಕ್ಕೆ ವಿಸ್ತರಿಸಲಾಗುತ್ತಿದೆ. ಹೊಸ ಸೈಕಲ್‌ಗಳು ಸ್ವಯಂ ಚಾಲಿತ ಸ್ಮಾರ್ಟ್ ಲಾಕ್ ವ್ಯವಸ್ಥೆಯನ್ನು ಹೊಂದಿದ್ದು, ಈ ಹಿಂದಿನ ಡಾಕಿಂಗ್ ವ್ಯವಸ್ಥೆ ಇರುವುದಿಲ್ಲ. ಸ್ಮಾರ್ಟ್ ಫೋನ್ ಮೂಲಕವೇ ಲಾಕ್ ಹಾಗೂ ಅನ್‌ಲಾಕ್ ಮಾಡುವ ವ್ಯವಸ್ಥೆ ಇರಲಿದೆ. ಹಾಗಾಗಿ ಈ ಹಿಂದಿನ ಡಾಕಿಂಗ್ ಸ್ಟೇಷನ್‌ಅನ್ನು ಆಧುನೀಕರಣಗೊಳಿಸಲಾಗುತ್ತಿದೆ.
ಹೊಸ ಎಲೆಕ್ಟ್ರಿಕಲ್ ಬೈಸಿಕಲ್‌ಗಳು ವಿಶೇಷವಾಗಿ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ನಗರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಖಾಸಗಿ ಸಂಸ್ಥೆಗಳ ಉದ್ಯೋಗಿಗಳು, ವಿದ್ಯಾರ್ಥಿಗಳು ಬೈಸಿಕಲ್ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಹೊಸ ಎಲೆಕ್ಟ್ರಿಕಲ್ ಬೈಸಿಕಲ್‌ನಲ್ಲಿ ಹೆಚ್ಚು ತುಳಿಯುವ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ಕಚೇರಿಗಳಿಗೆ ತೆರಳುವವರು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
ಕೋವಿಡ್ ನಂತರ ನಗರದ ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಾಗಿದ್ದು, ವಾಯುವಿಹಾರಕ್ಕೆ ತೆರಳುವವರು ಹಾಗೂ ಸೈಕಲ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೆ, ನಗರದಲ್ಲಿ ಪಬ್ಲಿಕ್ ಷೇರಿಂಗ್ ಸೈಕ್ಲಿಂಗ್ ವ್ಯವಸ್ಥೆಯಲ್ಲಿರುವ ‘ಟ್ರಿಣ್ ಟ್ರಿಣ್’ ಸೈಕಲ್‌ಗಳ ಬಳಕೆ ಪ್ರಮಾಣ ಕೂಡ ಹೆಚ್ಚಾಗಿದೆ. 2017ರ ಜೂನ್ 4 ರಂದು ಪ್ರಾರಂಭಗೊಂಡ ‘ಟ್ರಿಣ್ ಟ್ರಿಣ್ ಪಬ್ಲಿಕ್ ಬೈಸಿ ಕಲ್ ಷೇರಿಂಗ್’ ಯೋಜನೆಯಡಿ 15 ಸಾವಿರಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದು, ಪ್ರತಿನಿತ್ಯ 1,200 ರಿಂದ 1,800 ಜನರು ಬಳಕೆ ಮಾಡುತ್ತಿದ್ದರು. ಇದೀಗ ಈ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸಾಕಷ್ಟು ಜನರಿಗೆ ಅನಾನೂಕುಲವಾಗಿದೆ.
ಒಂದೆಡೆ ಹೊಸ ಸೈಕಲ್‌ಗಳನ್ನು ನೀಡಲು ಮುಂದಾಗಿರುವ ನಗರ ಪಾಲಿಕೆಯು ಮತ್ತೊಂದೆಡೆ ಬೈಸಿಕಲ್ ಬಳಕೆದಾರರಿಗೆ ಹೊಸ ಸೈಕಲ್ ಟ್ರಾೃಕ್ ನಿರ್ಮಾಣಕ್ಕೂ ಯೋಜನೆ ರೂಪಿಸಿದೆ. ನಗರದ ಲಲಿತ ಮಹಲ್ ರಸ್ತೆಯ ಒಂದು ಭಾಗದಲ್ಲಿ ದಶದಕ ಹಿಂದೆಯೇ ಸೈಕಲ್ ಟ್ರಾೃಕ್ ನಿರ್ಮಾಣ ಮಾಡಲಾಗಿದೆ. ಅದೇ ರೀತಿ ನಗರದ ವಿವಿಧ ಪ್ರಮುಖ ರಸ್ತೆಗಳಲ್ಲೂ ಸೈಕಲ್ ಟ್ರಾೃಕ್ ನಿರ್ಮಾಣ ಮಾಡಲು ಪಾಲಿಕೆ ಉದ್ದೇಶಿಸಿದೆ. ಒಟ್ಟು 3.3 ಕೋಟಿ ರೂ. ವೆಚ್ಚದಲ್ಲಿ 8.72 ಕಿ.ಮೀ. ಉದ್ದದ ಸೈಕಲ್ ಟ್ರ್ಯಾಕ್ ನಿರ್ಮಾಣ ಮಾಡಲಾಗುವುದು. ಜೆಎಲ್‌ಬಿ ರಸ್ತೆ, ಸೀತಾವಿಲಾಸ ರಸ್ತೆ, ಬೋಗಾದಿ ರಸ್ತೆ, ವಿಶ್ವಮಾನವ ರಸ್ತೆ, ಕೃಷ್ಣರಾಜ ಬುಲೇವಾರ್ಡ್ ರಸ್ತೆ, ಚಾಮರಾಜ ಜೋಡಿ ರಸ್ತೆ, ನ್ಯೂ ಕಾಂತರಾಜೇ ಅರಸ್ ರಸ್ತೆಯಲ್ಲಿ ನೂತನ ಸೈಕಲ್ ಟ್ರಾೃಕ್ ನಿರ್ಮಾಣಗೊಳ್ಳಲಿದೆ.
ಕಳೆದ 5 ವರ್ಷಗಳಲ್ಲಿ ನಗರದಲ್ಲಿ ಬೈಸಿಕಲ್ ಬಳಕೆಯನ್ನು ಜನಪ್ರೀಯಗೊಳಿಸಲು ‘ಟ್ರಿಣ್ ಟ್ರಿಣ್ ಪಬ್ಲಿಕ್ ಬೈಸಿ ಕಲ್ ಷೇರಿಂಗ್’ ಯೋಜನೆ ಮಹತ್ವದ ಕೊಡುಗೆ ನೀಡಿದೆ. ಬೈಸಿಕಲ್ ಸೇವೆಯು ನಮಗೆ ಅದ್ಭುತ ಅನುಭವಗಳನ್ನು ಒದಗಿಸಿದೆ. ನಗರದ ಜನರು ನಮ್ಮೊಂದಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಈ ಕಾರಣಕ್ಕೆ ಯೋಜನೆಯು ನಗರದಲ್ಲಿ ಯಶಸ್ವಿಯಾಗಿ 5 ವರ್ಷಗಳನ್ನು ಪೂರೈಸಿದೆ. ವಿದ್ಯಾರ್ಥಿಗಳು, ವಾಯು ವಿಹಾರಕ್ಕೆ ತೆರಳುವವರು, ಉದ್ಯೋಗಿಗಳಿಗೆ ಈ ಯೋಜನೆಯಿಂದ ಸಾಕಷ್ಟು ಅನುಕೂಲವಾಗಿದೆ.
ಆಶಾ, ವ್ಯವಸ್ಥಾಪಕಿ, ಗ್ರೀನ್ ವೀಲ್ ರೈಡ್