

ಮೈಸೂರು: ತ್ರಿಮತಸ್ಥ ಬ್ರಾಹ್ಮಣರು ಒಂದಾದಾಗ ಮಾತ್ರ ಬ್ರಾಹ್ಮಣರು ತಮ್ಮ ಶಕ್ತಿ ತೋರ್ಪಡಿಸಲು ಸಾಧ್ಯ ಎಂದು ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಅಭಿಪ್ರಾಯಪಟ್ಟರು.
ಹರಿದಾಸ ಸಂಗೀತ ಸಾಹಿತ್ಯೋತ್ಸವ ಸಮಿತಿ ವತಿಯಿಂದ ನಗರದ ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಧ್ವ-ಪುರಂದರ ನಮನ ಮತ್ತು ಗಾನಸಿರಿ ವೇದಾಂತ ಲಹರಿ ಕಾರ್ಯಕ್ರಮದಲ್ಲಿ ಮಾತನಾಡಿ, ಬ್ರಾಹ್ಮಣರ ಸಂಘಟನೆ ವಿಚಾರದಲ್ಲಿ ಸ್ವಲ್ಪಮಟ್ಟಿಗೆ ಯಶಸ್ಸು ಕಂಡಿದ್ದೇವೆ. ಆದರೆ, ಮತ್ತಷ್ಟು ಸಂಘಟಿತರಾಗುವ ಅವಶ್ಯಕತೆ ಇದೆ ಎಂದು ಹೇಳಿದರು.
ಸಮಾಜವನ್ನು ಸಂಘಟಿಸುವ ಸಂದರ್ಭ ಕುಹುಕದ ಮಾತುಗಳನ್ನು ಆಡುವವರು ಪ್ರತಿಯೊಂದು ಸಮಾಜದಲ್ಲಿ ಇದ್ದೇ ಇರುತ್ತಾರೆ. ಬ್ರಾಹ್ಮಣ ಸಮಾಜದ ಸಂಘಟನೆ ಸಂದರ್ಭ ಕೇಳಿ ಬರುವ ಯಾವುದೇ ರೀತಿಯ ಅಪಪ್ರಚಾರಗಳಿಗೆ ಯಾರೂ ಸಹ ಕಿವಿಗೊಡಬಾರದು. ಅಪಪ್ರಚಾರಗಳಿಗೆ ಕಿವಿಗೊಟ್ಟು ನಾವು ಬೇರ್ಪಟ್ಟರೆ ನಮ್ಮ ಶಕ್ತಿ ಕಳೆದುಕೊಳ್ಳುತ್ತೇವೆ ಎಂದರು.
ನಗರದ ಅವಧೂತ್ತ ದತ್ತಪೀಠದಲ್ಲಿ ತ್ರಿಮತಸ್ಥರನ್ನು ಒಗ್ಗೂಡಿಸಲು 2018ರಲ್ಲಿ ಬೃಹತ್ ಕಾರ್ಯಕ್ರಮ ನಡೆಸಿ ಯಶಸ್ವಿಯಾಗಿದ್ದೇವೆ. ಆ ಕಾರ್ಯಕ್ರಮದಲ್ಲಿ 20 ಸಾವಿರ ಬ್ರಾಹ್ಮಣರು ಪಾಲ್ಗೊಂಡಿದ್ದರು. ವಿಪ್ರರೆಲ್ಲರು ಅಂದು ಒಗ್ಗಟ್ಟಾಗಿ ಸೇರಿದ್ದರು. ಆದರೆ, ಆ ಕಾರ್ಯಕ್ರಮ ಮುಂದುವರೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ನಾವು ಬ್ರಾಹ್ಮಣರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಪ್ರಾರಂಭಿಸಿದಾಗ ನಮ್ಮಲ್ಲಿ ಒಗ್ಗಟ್ಟು ಮೂಡುತ್ತದೆ ಎಂದು ಹೇಳಿದರು.
ಶ್ರೀ ವ್ಯಾಸರಾಜ ಮಠದ ಪೀಠಾಧಿಪತಿ ಅವರ ಕಾರ್ಯದರ್ಶಿ ಪಂಡಿತ್ ಮಧುಸೂದನಾಚಾರ್ಯ ಮಾತನಾಡಿ, ಮಧ್ವಾಚಾರ್ಯರು ಗ್ರಂಥರೂಪದಲ್ಲಿ ನಮ್ಮ ಮುಂದಿದ್ದಾರೆ. ಅವರ ಗ್ರಂಥವನ್ನು ಅಧ್ಯಯನ ಮಾಡಿದ ವಿದ್ವಾಂಸರ ಬಳಿಯಲ್ಲೂ ಮಧ್ವಾಚಾರ್ಯರು ಇದ್ದಾರೆ ಎಂದು ಹೇಳಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಮಾತನಾಡಿ, ಇಂದು ನಾವು ಎಲ್ಲ ಸೌಲಭ್ಯಗಳನ್ನು ಹೊಂದಿರುವ ಸಮಾಜದಲ್ಲಿ ಬದುಕು ನಡೆಸುತ್ತಿದ್ದೇವೆ. ಆದರೆ, ಯಾವುದೇ ಸೌಲಭ್ಯಗಳು ಇಲ್ಲದ ಕಾಲದಲ್ಲಿಯೂ ಮಧ್ವ, ಪುರಂದರ ವಿಚಾರಗಳನ್ನು ಉಳಿಸಿ ಇಲ್ಲಿಯವರೆಗೆ ತಂದ ಕೀರ್ತಿ ಆಚಾರ್ಯರುಗಳಿಗೆ ಸಲ್ಲಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ವಿದ್ವಾಂಸರಾದ ಪಂಡಿತ್ ಪ್ರವೀಣಾಚಾರ್ಯ ಹುನುಗುಂದ, ಶ್ರೀ ಉತ್ತರಾದಿ ಮಠದ ವ್ಯವಸ್ಥಾಪಕ ಪಂಡಿತ್ ಅನಿರುದ್ಧಾಚಾರ್ಯ ಪಾಂಡುರಂಗಿ ಇದ್ದರು.