

ಕಿಕ್ಕೇರಿ: ಖ್ಯಾತ ತಬಲಾ ಮಾಂತ್ರಿಕ ಝಾಕೀರ್ ಹುಸೇನ್, ವೃಕ್ಷದೇವತೆ ತುಳಸಿ ಗೌಡರ ನಿಧನದಿಂದ ದೇಶಕ್ಕೆ ಬಹುದೊಡ್ಡ ನಷ್ಟವಾಗಿದೆ ಎಂದು ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ, ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದರು.
ಇಲ್ಲಿನ ಸ್ಪಂದನಾ ಫೌಂಡೇಷನ್, ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್, ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ಝಾಕೀರ್ ಹುಸೇನ್ ಹಾಗೂ ವೃಕ್ಷದೇವತೆ ತುಳಸಿ ಗೌಡರ ಶದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಪಕ್ಕವಾದ್ಯಕ್ಕೆ ಸೀಮಿತವಾಗಿದ್ದ ತಬಲಾ ವಾದ್ಯವನ್ನು ಪ್ರಮುಖ ವಾದ್ಯವಾಗಿ ಪ್ರಧಾನ ವೇದಿಕೆಗೆ ತಂದು ವಿಶ್ವಕ್ಕೆ ಪರಿಚಯಿಸಿದ ತಬಲಾ ಮಾಂತ್ರಿಕ, ಗಾರುಡಿಗ ಝಾಕೀರ್ ಹುಸೇನ್ ತಮ್ಮ ತಬಲಾ ವಾದನದ ಮೋಡಿಯ ಮೂಲಕ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.
ಪದ್ಮಶ್ರೀ ಪುರಸ್ಕೃತೆ, ವೃಕ್ಷದೇವತೆ ತುಳಸಿಗೌಡ ಅನಕ್ಷರಸ್ಥಳಾಗಿ ಬಡತನದ ಬೇಗೆಯಲ್ಲೂ ಗ್ರಾಮೀಣ ಪ್ರದೇಶದ ಅಪ್ಪಟ ಪರಿಸರ ಪ್ರೇಮಿಯಾಗಿದ್ದರು. ಸಹಸ್ರಾರು ಗಿಡಮರ ಬೆಳೆಸಿ ಪರಿಸರ ನಾಶದ ವೇಳೆಗೆ ಶುದ್ಧಗಾಳಿ ನೀಡುವ ದೇವತೆಯಾಗಿದ್ದು ಇವರ ಆದರ್ಶ ಗುಣ ಯುವ ಪೀಳಿಗೆ ಪಾಲಿಸಿದರೆ ವೃಕ್ಷಸಂಪತ್ತು, ಪರಿಸರ, ಆರೋಗ್ಯ ಎಲ್ಲವೂ ಉಳಿಯಲಿದೆ ಎಂದರು.
ಪರಿಸರ ಗೀತೆಯನ್ನು ಮಕ್ಕಳೊಂದಿಗೆ ಹಾಡಿ ಪರಿಸರಪ್ರೇಮ ಮೆರೆದರು. ಉದ್ಯಮಿ ಆದರ್ಶ, ನೆಲಮಂಗಲ ಸುಬ್ರಹ್ಮಣ್ಯ, ಸತೀಶ್, ತ್ರಿವೇಣಿ, ಕವಿತಾ ಮತ್ತಿತರರಿದ್ದರು.