

ಗೋಕರ್ಣ: ಶ್ರೀ ರಾಮಚಂದ್ರಾಪುರ ಮಠದಿಂದ ವಾರ್ಷಿಕವಾಗಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆಗೈದ ಸಾರ್ಥಕ ಸಾಧಕರಿಗೆ ಕೊಡಮಾಡುವ ವಿಶೇಷ ಪ್ರಶಸ್ತಿ ಪ್ರದಾನ ಸಮಾರಂಭ ಅಶೋಕೆಯ ಗುರುದೃಷ್ಟಿ ಸಭಾಭವನದಲ್ಲಿ ಮೇ 31ರಂದು ಮಧ್ಯಾಹ್ನ 12-30ಕ್ಕೆ ನಡೆಯಲಿದೆ.
ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಏಳು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಸಮ್ಮಾನಿಸಲಿದ್ದಾರೆ.
ಶ್ರೀಕ್ಷೇತ್ರ ಶಕಟಪುರಮ್ ಆಸ್ಥಾನ ವಿದ್ವಾಂಸ ಮಧುಸೂದನ ಶಾಸ್ತ್ರಿ ಹಂಪಿಹೊಳಿ ಅವರಿಗೆ ಶಂಕರ-ಕಿಂಕರ, ರಾಜ್ಯ ಸಂಸ್ಕೃತ ವಿವಿ ಕುಲಪತಿ ಡಾ.ಎಸ್. ಅಹಲ್ಯಾ ಶರ್ಮಾ ಮತ್ತು ಗುರುಸೇವೆಯಲ್ಲಿ ಸಾರ್ಥ್ಯಕ್ಯ ಕಂಡ ದಿ. ಮಹಾಲಕ್ಷ್ಮೀ ತಿಮ್ಮಪ್ಪ ಅವರಿಗೆ ಶ್ರೀಮಾತಾ, ಪ್ರಸಿದ್ಧ ಜ್ಯೋತಿಷ ವಿದ್ವಾಂಸ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಅವರಿಗೆ ಪಾಂಡಿತ್ಯ, ದಿ.ಮೂಗಿಮನೆ ಗಣಪತಿ ಹೆಗಡೆ ಅವರಿಗೆ ಪುರುಷೋತ್ತಮ, ಸಾಗರದ ಸಮಾಜ ಸೇವಕ ಪಿ.ಡಿ. ಶ್ರೀಧರರಾವ್ ಅವರಿಗೆ ಚಾತುರ್ವಸ್ಯ ಮತ್ತು ಗೋವಿಂದ ಗಣಪತಿ ಹೆಗಡೆ ಅವರಿಗೆ ಧನ್ಯಸೇವಕ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಮಠದ ಪ್ರಧಾನ ಆಡಳಿತಾಧಿಕಾರಿ ಸಂತೋಷ ಹೆಗಡೆ, ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮತ್ತು ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು ಪ್ರಕಟಣೆಯಲ್ಲಿ ಕೋರಿದ್ದಾರೆ.