ಮಹಾಸಂಗಮ ಸಮಾನ ಮನಸ್ಕರಿಂದ ಡಾ.ಎಸ್.ಎಲ್.ಭೈರಪ್ಪಗೆ ಶ್ರದ್ಧಾಂಜಲಿ

19
Published on

ಹಿರಿಯ ಸಾಹಿತಿ ದಿ.ಡಾ.ಎಸ್.ಎಲ್.ಭೈರಪ್ಪ ಅವರಿಗೆ ನಗರದ ಮಹಾಸಂಗಮ ಸಮಾನ ಮನಸ್ಕ ಗೆಳೆಯರ ಬಳಗಗಳ ಒಕ್ಕೂಟದ ವತಿಯಿಂದ ಶನಿವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅಗ್ರಹಾರದ ಒಕ್ಕೂಟದ ಸಭಾಂಗಣದಲ್ಲಿ ಆಯೋಜಿಸಿದ್ದ ಗಣ್ಯರು ಭೈರಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಸಿದ್ಧಾರ್ಥ ನಗರದ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಕುಮಾರ್ ಮಾತನಾಡಿ, ಕನ್ನಡ ಸಾಹಿತ್ಯ ಲೋಕದ ಅಪ್ರತಿಮ ಬರಹಗಾರರಾದ ಭೈರಪ್ಪನವರು ಕಾಲ್ಪನಿಕ ಕಥೆಗಳ ಆಧಾರದ ಮೇಲೆ ಕಾದಂಬರಿಗಳನ್ನು ಬರೆಯದೆ ಪ್ರಯೋಗಶೀಲತೆಗೆ ತಮ್ಮನ್ನು ಒಳಪಡಿಸಿಕೊಂಡು ವಸ್ತುನಿಷ್ಟವಾಗಿ ಕಾದಂಬರಿ ರಚಿಸುತ್ತಿದ್ದರು. ಹಾಗಾಗಿ ಅವರು ಕನ್ನಡಿಗರಲ್ಲದೆ ದೇಶಾದ್ಯಂತ ಓದುಗರನ್ನು ಸೂಜಿಗಲ್ಲಿನಂತೆ ಸೆಳೆಯಲು ಸಾಧ್ಯವಾಯಿತು.

ತಾವು ಅನುಭವಿಸಿದ ಸತ್ಯ ಘಟನೆಗಳನ್ನು ತಮ್ಮ ಕಾದಂಬರಿಗಳ ಮೂಲಕ ನಿರ್ಭೀತವಾಗಿ ಬರೆದಿದ್ದರಿಂದ ಅವರ ಕಾದಂಬರಿಗಳು ಲಕ್ಷಾಂತರ ಓದುಗರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತಿದ್ದವು ಎಂದರು.

ಒಕ್ಕೂಟದ ಸಂಸ್ಥಾಪಕ ಕಲ್ಮಳ್ಳಿ ನಟರಾಜು ಮಾತನಾಡಿ, ನಾಡಿನ ಶ್ರೇಷ್ಠ ಸಾಹಿತಿ ಭೈರಪ್ಪ ಅವರನ್ನು ಕಳೆದುಕೊಂಡಿದ್ದು, ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ. ಬದುಕಿನಲ್ಲಿ ನೋವು, ಸಂಕಷ್ಟಗಳನ್ನು ಎದುರಿಸಿದ ಭೈರಪ್ಪ ಸಾಧಕರಾಗಿ ಬೆಳೆದಿದ್ದು, ಎಲ್ಲರೂ ಹೆಮ್ಮೆ ಪಡುವಂಥದ್ದು. ಭೈರಪ್ಪನವರ ಸಾಹಿತ್ಯ ಓದುಗರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದೆ ಎಂದರು.

ಭೈರಪ್ಪನವರ ಸಾಹಿತ್ಯದಲ್ಲಿ ತಿರುಳಿಲ್ಲದೆ ಇದ್ದರೆ ಅನೇಕ ಭಾಷೆಗಳಲ್ಲಿ ಅವರ ಕಾದಂಬರಿಗಳು ಭಾಷಾಂತರ ಗೊಳ್ಳುತ್ತಿರಲಿಲ್ಲ ಮತ್ತು ಸರಸ್ವತಿ ಸಮ್ಮಾನ್ ಅಂತಹ ಪ್ರಶಸ್ತಿಗಳು ಕನ್ನಡಕ್ಕೆ ಧಕ್ಕುತಿರಲಿಲ್ಲ. ತಮ್ಮ ಕಾವ್ಯ ಕಾದಂಬರಿಗಳಲ್ಲಿ ಆತ್ಮಕಥನ ಪೌರಾಣಿಕ ಗ್ರಂಥಗಳನ್ನು ವಿಮರ್ಶಿಸಿ ಸತ್ಯ ಹೇಳುವಂತಹ ದಿಟ್ಟ ಪ್ರಯತ್ನದ ಫಲವೇ ಭೈರಪ್ಪ ಅವರು ಓದುಗರ ಹೃದಯಲ್ಲಿ ಸದಾ ಕಾಲ ನೆಲೆಸಲು ಸಾಧ್ಯವಾಯಿತು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿ, ಭೈರಪ್ಪ ಅವರಿಗೆ ಹಾಸನ ಜಿಲ್ಲೆ ಹುಟ್ಟೂರಾದರು ಮೈಸೂರನ್ನೇ ತಮ್ಮ ಕಾರ್ಯ ಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಅವರ ನಾಲ್ಕಾರು ಪುಸ್ತಕ ಬಿಡುಗಡೆಗೊಳಿಸುವ ಭಾಗ್ಯ ನನಗೆ ಒದಗಿ ಬಂದಿದ್ದು ನನ್ನ ಸೌಭಾಗ್ಯ. ಮಿತ ಭಾಷೆಗಳಾಗಿದ್ದ ಭೈರಪ್ಪ ಅವರು ಕೃತಿಯ ರೂಪದಲ್ಲಿ ಅವರ ಜ್ಞಾನವನ್ನು ಕನ್ನಡ ಮತ್ತು ಕನ್ನಡಿಗರಿಗೆ ನೀಡಿದ ಅನರ್ಘ್ಯ ರತ್ನ ಎಂದರು. ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಅಖಿಲ ಭಾರತ ವೀರಶೈವ ಮಹಾಸಭಾ ಮೈಸೂರು ಜಿಲ್ಲಾ ಘಟಕದ ನಿರ್ದೇಶಕರಾದ ವಿರೂಪಾಕ್ಷ, ಭಾಗ್ಯಾ ಬೀರಿಹುಂಡಿ, ಮಲ್ಲೇಶ್, ಪುಟ್ಟ ಸುಬ್ರಮಣ್ಯ, ಶಿಕ್ಷಕ ಶಿವಕುಮಾರ್, ಸಂಗಮ ಗೆಳೆಯರ ಬಳಗದ ಕಾರ್ಯದರ್ಶಿ ಚೇತನ್, ಶಿಕ್ಷಕ ಬಾಗಲಿ ಮಹೇಶ್, ಉಪನ್ಯಾಸಕ ಮಹದೇವಸ್ವಾಮಿ, ಚೂಡಾಮಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net