ಬರೆದಂತೆ ಬದುಕು ನಡೆಸಿದ ವೆಂಕಟೇಶಮೂರ್ತಿ: ಅಲಯನ್ಸ್ ಸಂಸ್ಥೆಯ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಬಣ್ಣನೆ

Tributes to Dr. H.S. Venkateshamurthy Mandya
Published on

ಮಂಡ್ಯ: ನಾಡು ಕಂಡ ಅಪರೂಪದ ಭಾವಗೀತೆಗಳ ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಬರೆದಂತೆ ಬದುಕಿದವರು. ಅವರ ಸಾಹಿತ್ಯದಲ್ಲಿ ಜೀವನದ ಮೌಲ್ಯಗಳನ್ನೇ ಕಾಣಬಹುದಾಗಿದೆ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆಯ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಅಭಿಪ್ರಾಯಪಟ್ಟರು.

ನಗರದ ಸೇವಾಕಿರಣ ಸಭಾಂಗಣದಲ್ಲಿ ಅಸೋಸಿಯೇಷನ್ ಆಫ್ ಆಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ಹಾಗೂ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ಖ್ಯಾತ ಸಾಹಿತಿ ದಿ.ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ ಹಾಗೂ ನುಡಿನಮನ, ಗೀತನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಹಿತ್ಯ ಕ್ಷೇತ್ರಕ್ಕೆ ವೆಂಕಟೇಶಮೂರ್ತಿ ಕೊಡುಗೆ ಅಪಾರ. ಅವರ ಸಾಹಿತ್ಯಗಳು ಚಿರನೂತನ. ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಂತಿದ್ದ ಎಚ್.ಎಸ್.ವೆಂಕಟೇಶಮೂರ್ತಿ ಅವರ ಅಗಲಿಕೆ ಸಾರಸತ್ವ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವಿಷಾಧಿಸಿದರು.

ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಜಿ.ಧನಂಜಯ ದರಸಗುಪ್ಪೆ ಮಾತನಾಡಿ, ಕವಿತೆಯಿಂದ ಪ್ರಾರಂಭವಾದ ಸಾಹಿತ್ಯದ ಕೃಷಿ, ಕಥೆ, ಕಾದಂಬರಿ, ನಾಟಕ, ಮಕ್ಕಳ ಸಾಹಿತ್ಯ, ಸಂಪಾದನೆ, ಅನುವಾದ, ಕಿರುತೆರೆ, ಸಿನಿಮಾ ಹಾಗೂ ಮಹಾಕಾವ್ಯದವರೆಗೂ ಕೃಷಿ ಮಾಡಿದ ಅಪರೂಪದ ಸಾಹಿತಿಗಳಾಗಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಸಾಹಿತ್ಯದ ಎಲ್ಲ ಪ್ರಾಕಾರಗಳಲ್ಲಿ ಕೃತಿ ರಚಿಸಿದ್ದಾರೆ ಎಂದರೆ ತಪ್ಪಾಗಲಾರದು. ಎರಡು ಬಾರಿ ಕೇಂದ್ರ ಸಾಹಿತ್ಯ ಅಕಾಡೆಮಿ, ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಲವಾರು ಪ್ರಮುಖ ರಾಜ್ಯ ಪ್ರಶಸ್ತಿಗಳು ದೊರೆತರೂ, 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ದೊರೆತರೂ ಎಂದು ಹಮ್ಮು -ಬಿಮ್ಮು ತೋರಿದವರಲ್ಲ ಎಂದು ಸ್ಮರಿಸಿದರು.

ಸ್ವತಃ ಹಾಡುಗಾರ, ಸಂಭಾಷಣೆಗಾರ, ನಟ, ನಿರ್ದೇಶಕರರಾಗಿದ್ದು ಹೆಮ್ಮೆಯ ವಿಷಯ. ಅವರು ರಚಿಸಿದ ಭಾವಗೀತೆ, ಶೀರ್ಷಿಕೆ ಗೀತೆ , ಚಿತ್ರಗೀತೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಶಾಶ್ವತವಾಗಿ ಉಳಿದಿರುವುದನ್ನು ಸ್ಮರಿಸಬಹುದಾಗಿದೆ ಎಂದರು.

ಸೇವಾಕಿರಣ ವೃದ್ದಾಶ್ರಮ ಕಾರ್ಯದರ್ಶಿ ಜಿ.ವಿ.ನಾಗರಾಜು ಮಾತನಾಡಿ, ಕವಿ ಎಚ್‌ಎಸ್‌ವಿ ಅವರ ಉಸಿರು ನಿಂತಿರಬಹುದು. ಆದರೆ ಭಾವಗೀತೆಗಳ ಮೂಲಕ ಅವರ ಹೆಸರು ಚಿರಸ್ಥಾಯಿ. ಸಾಹಿತ್ಯ, ಸಂಗೀತ ಲೋಕ ಅವರನ್ನು ಸದಾ ಸ್ಮರಿಸಿಕೊಳ್ಳುತ್ತದೆ ಎಂದು ತಿಳಿಸಿದರು.

ಆರ್‌ಎಪಿಸಿಎಂಎಸ್ ನಿರ್ದೇಶಕ ಕಲ್ಲಹಳ್ಳಿ ಕೆ.ಸಿ.ರವೀಂದ್ರ, ಅಲಯನ್ಸ್‌ನ 2ನೇ ಗವರ್ನರ್ ಚಂದ್ರಶೇಖರ್, ಅವಿನಾಶ್, ನಾಗರಾಜು, ಲೋಕೇಶ್, ಶಿಕ್ಷಕ ಬಲ್ಲೇನಹಳ್ಳಿ ಮಂಜುನಾಥ್, ಶಿವು, ಮಲ್ಲೇಶ್ ಇತರರಿದ್ದರು. ಇದೇ ಸಂದರ್ಭದಲ್ಲಿ ಎಚ್.ಎಸ್.ವೆಂಕಟೇಶಮೂರ್ತಿ ಅವರ ಜನಪ್ರಿಯ ಭಾವಗೀತೆ, ಚಿತ್ರಗೀತೆಗಳನ್ನು ಪ್ರತಿಭಾಂಜಲಿ ಡೇವಿಡ್ ಸುಶ್ರಾವ್ಯವಾಗಿ ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net