

ಗೋಣಿಕೊಪ್ಪಲು: ರೈತ ಸಂಘದ ಹುಟ್ಟಿಗೆ ಬುನಾದಿ ಹಾಕಿದ, ನರಗುಂದ-ನವಲಗುಂದ ಹಾಗೂ ಈವರೆಗೆ ಹೋರಾಟದಲ್ಲಿ ಹುತಾತ್ಮರಾದ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಇಲ್ಲಿನ ರೈತ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ರೈತ ಮುಖಂಡರು ಪಾಲ್ಗೊಂಡಿದ್ದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ಜಿಲ್ಲಾ ಸಂಚಾಲಕರಾದ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಮಾತನಾಡಿ, ರೈತರ ಹೋರಾಟದಲ್ಲಿ ನ್ಯಾಯ ಸಿಗಲಿದೆ ಎಂಬ ಭರವಸೆ ಪ್ರತಿ ನಾಗರಿಕನಲ್ಲೂ ಇದೆ. ಹಲವು ಹಿರಿಯ ರೈತ ಮುಖಂಡರು ಹೋರಾಟ ಮಾಡುವ ಮೂಲಕ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಹೀಗಾಗಿ ಅಂತಹವರನ್ನು ರಾಜ್ಯಾದ್ಯಂತ ರೈತ ಸಂಘ ಸ್ಮರಿಸುತ್ತಿದೆ ಎಂದರು.
ಜಿಲ್ಲೆಯಲ್ಲಿ ರೈತ ಸಂಘದಿಂದ ಹೋರಾಟ ಮಾಡಲಾಗುತ್ತಿದ್ದು, ಈಗಾಗಲೇ ಹಲವು ಹೋರಾಟಗಳಿಗೆ ನ್ಯಾಯ ಲಭಿಸಿದೆ. ಮುಂದೆಯೂ ಇಲ್ಲಿನ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರೈತ ಸಂಘ ಹೋರಾಟ ಆರಂಭಿಸಲಿದೆ ಎಂದರು.
ಸಭೆಯಲ್ಲಿ ರೈತ ಸಂಘದ ಶ್ರೀಮಂಗಲ ಹೋಬಳಿ ಅಧ್ಯಕ್ಷ ಚಟ್ಟಂಗಡ ಕಂಬ ಕಾರ್ಯಪ್ಪ, ಬಾಳೆಲೆ ಹೋಬಳಿ ಅಧ್ಯಕ್ಷ ಮೇಚಂಡ ಕಿಶ ಮಾಚಯ್ಯ, ಪದಾಧಿಕಾರಿಗಳಾದ ಸಣ್ಣುವಂಡ ಕಿಶೋರ್ ಮಾಚಯ್ಯ, ಮಾರಮಾಡ ಪೂಣಚ್ಚ, ಮಚ್ಚಮಾಡ ಗಣೇಶ್, ರಾಜಮಣಿ ಇತರರಿದ್ದರು.