

ಬೇಲೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಬಾರಿ ಎನ್.ನಿಡಗೋಡು ಗ್ರಾಮದ ಯುವ ಸಾಹಿತಿ ಸುಮಲತಾ ಪೃಥ್ವಿರಾಜ್ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದು ದೇಶ ಭಕ್ತರ ಬಳಗದ ಅಧ್ಯಕ್ಷ ಡಾ.ಸಂತೋಷ್ ಹೇಳಿದರು.
ಕಥೆ, ಕವನಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಡುತ್ತಿರುವ ಗ್ರಾಮೀಣ ಪ್ರತಿಭೆ ಸುಮಲತಾ ಪೃಥ್ವಿರಾಜ್ ಅವರನ್ನು ತಾಲೂಕಿನ ಎನ್.ನಿಡಗೋಡು ಗ್ರಾಮದ ಅವರ ಸ್ವಗೃಹದಲ್ಲಿ ದೇಶ ಭಕ್ತರ ಬಳಗದಿಂದ ಶನಿವಾರ ಸನ್ಮಾನಿಸಿ ಮಾತನಾಡಿದ ಅವರು, ವಿವಿಧ ಕ್ಷೇತ್ರಗಳಲ್ಲಿರುವ ಸಾಕಷ್ಟು ಗ್ರಾಮೀಣ ಪ್ರತಿಭೆಗಳು ಸಮಾಜದ ಮುಖ್ಯ ವಾಹಿನಿಗೆ ಬರುವ ಮುನ್ನವೇ ಮುದುಡಿ ಹೋಗುತ್ತಿವೆ. ಹೀಗಾಗಿ ಇಂತವರನ್ನು ಬಳಗವು ಯಾವುದೇ ಜಾತಿ, ಧರ್ಮ ಎನ್ನದೆ ಸನ್ಮಾನಿಸಿ ಗೌರವಿಸುತ್ತಿದ್ದೇವೆ ಎಂದರು.
ತಾಲೂಕಿನ ಎನ್.ನಿಡಗೋಡು ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಗ್ರಾಮೀಣ ಪ್ರತಿಭೆ ಸುಮಲತಾ ಪೃಥ್ವಿರಾಜ್, ಚಿಕ್ಕಂದಿನಲ್ಲೇ ಸಾಹಿತ್ಯದತ್ತ ಆಸಕ್ತಿ ಬೆಳೆಸಿಕೊಂಡಿದ್ದರು ಎಂಬುದು ಅವರ ಶಿಕ್ಷಕರಿಂದ ತಿಳಿದು ಬಂದಿದೆ. ಅಲ್ಲದೆ ಶಿಕ್ಷಕಿ ಹಾಗೂ ಸಾಹಿತಿ ಆಶಾ ಕಿರಣ್ ಮತ್ತು ಕಲಾವತಿ ಅವರ ಮಾರ್ಗದರ್ಶನದಲ್ಲಿ ಸುಮಲತಾ ಅವರು ದೊರೆಸಾನಿ ಕಾವ್ಯ ನಾಮದೊಂದಿಗೆ ತಮ್ಮ ಚೊಚ್ಚಲ ಕೃತಿ ಧರೆಯ ದೊರೆ ಕವನ ಸಂಕಲನವನ್ನು ಲೋಕಾರ್ಪಣೆ ಮಾಡುವ ಮಹಾದಾಸೆ ಹೂತ್ತಿದ್ದಾರೆ. ಸಾಹಿತಿ ಸುಮಲತಾ ಪೃಥ್ವಿರಾಜ್ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ತಾವು ಬೆಳೆಯಲಿ ಇತರರನ್ನು ಪ್ರೋತ್ಸಾಹಿಸಲಿ ಎಂದು ಶುಭ ಹಾರೈಸಿದರು.
ದೇಶ ಭಕ್ತರ ಬಳಗದ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮಾತನಾಡಿ, ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಿದೆ. ಕನ್ನಡವನ್ನು ಮನೆಯಿಂದಲೇ ಮಕ್ಕಳಿಗೆ ಹೇಳಿ ಕೊಡುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ಯುವ ಸಾಹಿತಿ ಸುಮಲತಾ ಅವರ ತಾಯಿ ರುದ್ರಮ್ಮ, ಆಶಾ ಕಾರ್ಯಕರ್ತೆ ಕಮಲಮ್ಮ, ಗ್ರಾಮದ ಮುಖಂಡರಾದ ಉಮೇಶ್, ಸಿದ್ದೇಶ್, ಕುಮಾರ್ ಸೇರಿದಂತೆ ಇತರರಿದ್ದರು.