

ಹುಬ್ಬಳ್ಳಿ: ಯೋಗದ ಕ್ಷೇತ್ರದಲ್ಲಿ ಸಲ್ಲಿಸಿದ ನಿಸ್ವಾರ್ಥ ಸೇವೆಗಾಗಿ ಯೋಗ ಗುರು ಭವರಲಾಲ್ ಆರ್ಯ ಅವರನ್ನು ನಗರದ ಶ್ರೀ ಸಿದ್ಧಾರೂಢ ಮಠದ ಕೈಲಾಸ ಮಂಟಪದಲ್ಲಿ ಸೋಮವಾರ ಸನ್ಮಾನಿಸಲಾಯಿತು.
ಸನ್ಮಾನಿಸಿ ಮಾತನಾಡಿದ ಶ್ರೀಮಠದ ಟ್ರಸ್ಟಿ ಶಾಮಾನಂದ ಪೂಜೇರಿ, 35 ವರ್ಷಗಳಿಂದ ರಾಜ್ಯದ ಮೂಲೆ ಮೂಲೆಯಲ್ಲಿ ಸಂಚರಿಸಿ ಯೋಗ ಕಲಿಸಿಕೊಟ್ಟಿದ್ದಾರೆ. 10 ಸಾವಿರಕ್ಕೂ ಹೆಚ್ಚು ಯೋಗ ಶಿಕ್ಷಕರನ್ನು ತರಬೇತುಗೊಳಿಸಿದ್ದಾರೆ. ಸಾವಿರಾರು ಯೋಗ ಕೇಂದ್ರಗಳಲ್ಲಿ ಉಚಿತವಾಗಿ ಯೋಗ ತರಬೇತಿ ನೀಡಲು ಪ್ರೇರೇಪಿಸಿದ್ದಾರೆ ಎಂದು ಬಣ್ಣಿಸಿದರು.
ಬರೀ ಕರ್ನಾಟಕವಷ್ಟೇ ಅಲ್ಲ, ದೇಶ-ವಿದೇಶಗಳಲ್ಲಿಯೂ ಭವರಲಾಲ್ ಆರ್ಯ ಅವರು ಯೋಗದ ಕಂಪು ಹರಡಿಸಿದ್ದಾರೆ. ಪ್ರತಿ ನಿತ್ಯ ಆನ್‌ಲೈನ್ ಮೂಲಕ ಲಕ್ಷಾಂತರ ಸಾಧಕರಿಗೆ ಉಚಿತವಾಗಿ ಯೋಗ ಕಲಿಸುತ್ತಿದ್ದಾರೆ. ಮೂಲತಃ ರಾಜಸ್ತಾನಿಯಾದರೂ ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ ಬಗ್ಗೆ ಅಪಾರ ಗೌರವ ಹೊಂದಿದಾರೆ. ಸ್ವಚ್ಚ ಕನ್ನಡದಲಿಯೇ ಯೋಗದ ಮಾರ್ಗದರ್ಶನ ನೀಡುತ್ತಿದಾರೆ ಎಂದರು.
ಶ್ರೀ ಸಿದ್ಧಾರೂಢ ಸ್ವಾಮಿಗಳ ಮಠ ಟ್ರಸ್ಟ್ ಕಮಿಟಿ ಚೇರ್ಮನ್‌ಬಸವರಾಜ ಕಲ್ಯಾಣಶೆಟ್ಟರ್, ಟ್ರಸ್ಟಿಗಳಾದ ಬಾಳು ಮಗಚಿಕೊಂಡಿ, ಹಿರಿಯ ಯೋಗ ಶಿಕ್ಷಕರಾದ ರಾಜಶೇಖರ ಕುದುರಿ, ವಿಜಯಲಕ್ಷ್ಮೀ ಮುಂತಾದವರಿದ್ದರು.