ಯಶವಂತ ರೈಯವರಿಗೆ ವಿಶಿಷ್ಟ ಗುರುನಮನ : ವಾಹನ ಜಾಥಾದಲ್ಲಿ ಕರೆತಂದು ಪುಷ್ಪಾರ್ಚನೆ

yashvanth
Published on

ಸುಬ್ರಹ್ಮಣ್ಯ: ಎಸ್‌ಎಸ್ ಪಿಯು ಕಾಲೇಜು ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಕೆ.ಯಶವಂತ ರೈ ಅವರ ನಿವೃತ್ತಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಹಿರಿಯ ಶಿಷ್ಯರು ಗುರುಗಳನ್ನು ಕುಕ್ಕೆ ದೇವಳದ ಬಳಿಯಿಂದ ತೆರೆದ ವಾಹನದಲ್ಲಿ ಜಾಥಾದ ಮೂಲಕ ಮೆರವಣಿಗೆಯಲ್ಲಿ ಕರೆತಂದರು.

ಪ್ರಸ್ತುತ ಶಿಷ್ಯರು ವಲ್ಲೀಶ ಸಭಾಭವನದ ಮುಂಭಾಗದಿಂದ ಕಾಲೇಜು ರಸ್ತೆಯಲ್ಲಿ ಇಕ್ಕೆಲದಲ್ಲಿ ನಿಂತು ಪುಷ್ಪಾರ್ಚನೆ ಮಾಡಿದರು. ಈ ರೀತಿ ಸಂಸ್ಥೆ ವತಿಯಿಂದ ಅದ್ದೂರಿ ಗೌರವಾರ್ಪಣೆ ಮೂಲಕ ಶಾಲೆಗೆ ಬರ ಮಾಡಿಕೊಳ್ಳಲಾಯಿತು.

ಕೆ.ಯಶವಂತ ರೈ ಅವರನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬಳಿಯಿಂದ ತೆರೆದ ವಾಹನದಲ್ಲಿ ಬ್ಯಾಂಡ್, ವಾದ್ಯ, ಚೆಂಡೆ ಸಹಿತ ವಲ್ಲೀಶಾ ಸಭಾಭವನದವರೆಗೆ ಕರೆತರಲಾಯಿತು. ಅಲ್ಲಿಂದ ಮೆರವಣಿಗೆಯಲ್ಲಿ ಎಸ್‌ಎಸ್‌ಪಿಯು ವಿದ್ಯಾಸಂಸ್ಥೆಗೆ ಗೌರಪೂರ್ವಕವಾಗಿ ಸ್ವಾಗತಿಸಲಾಯಿತು. ಸಂಸ್ಥೆ 1,500 ವಿದ್ಯಾರ್ಥಿಗಳು ತಮ್ಮ ನಿವೃತ್ತರಾಗಲಿರುವ ಗುರುಗಳಿಗೆ ಪುಷ್ಪಾರ್ಚನೆ ನೆರವೇರಿಸಿದರು. ಸಂಸ್ಥೆಗೆ ಆಗಮಿಸಿದ ಕೆ.ಯಶವಂತ ರೈ ತಮ್ಮ ಕಡೆಯ ದಿನದ ಕರ್ತವ್ಯ ನಿರ್ವಹಿಸಿ, ಕೃತಜ್ಞತೆ ಸಲ್ಲಿಸಿದರು.

ಕಾಲೇಜು ಪ್ರಾಂಶುಪಾಲ ಸೋಮಶೇಖರ್ ನಾಯಕ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್., ಉಪಾಧ್ಯಕ್ಷ ಲೋಕೇಶ್ ಬಿ.ಎನ್., ಕಾರ್ಯದರ್ಶಿ ರತ್ನಾಕರ ಎಸ್., ಪ್ರಮುಖರಾದ ದೀಪಕ್ ನಂಬಿಯಾರ್, ಶಿವಪ್ರಸಾದ್ ಪಿಂಡಿಮನೆ, ಆದರ್ಶ ಕೆ.ಆರ್., ರವೀಂದ್ರ ಕುಮಾರ್ ರುದ್ರಪಾದ, ಸೇರಿದಂತೆ ಶಿಷ್ಯವೃಂದ, ಸಂಸ್ಥೆ ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ, ಹಿತೈಷಿಗಳು, ಶಾಲಾ ಸಮಿತಿಯವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net