ಧೈರ್ಯ ಮೆರೆದ ಆಟೋ ಚಾಲಕಗೆ ಸನ್ಮಾನ: ಅಪಘಾತ ತಪ್ಪಿಸಲು ಬಸ್ಸಿಗೆ ರಿಕ್ಷಾದಿಂದ ತಡೆ : ಹಿಂದು ಜಾಗರಣ ವೇದಿಕೆಯಿಂದ ಗೌರವ

Mbd_Sanmana
Published on

ಮೂಡುಬಿದಿರೆ: ತೋಡಾರಿನಲ್ಲಿ ಸೋಮವಾರ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತವಾಗುವ ವೇಳೆ ಬಸ್ಸಿಗೆ ಅಡ್ಡವಾಗಿ ಆಟೋವನ್ನು ತಂದಿಟ್ಟು ಹೆಚ್ಚಿನ ಅಪಾಯ ಸಂಭವಿಸುವುದನ್ನು ತಪ್ಪಿಸಿದ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ ಆಟೋ ಚಾಲಕ ವಿಶ್ವನಾಥ ಪೂಜಾರಿ ಅವರನ್ನು ಮೂಡುಬಿದಿರೆ ತಾಲೂಕು ಹಿಂದು ಜಾಗರಣ ವೇದಿಕೆಯಿಂದ ಸನ್ಮಾನಿಸಲಾಯಿತು.

ಸಮಾಜ ಮಂದಿರದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ರಾತ್ರಿ ಹಗಲೆನ್ನದೆ ವೃತ್ತಿ ನಿರ್ವಹಿಸುವ ರಿಕ್ಷಾ ಚಾಲಕರು ತೋರುವ ಸೇವೆ, ಮಾನವೀಯ ಮೌಲ್ಯ ಶ್ರೇಷ್ಠವಾದದ್ದು. ಈ ಘಟನೆಯಿಂದ ವಿಶ್ವನಾಥ್ ಪೂಜಾರಿ ಹದಯವಂತಿಕೆ ಬೆಳಕಿಗೆ ಬಂದಂತಾಗಿದೆ ಎಂದರು.

ಹಿಂಜಾವೇ ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರೆಗುಡ್ಡೆ ಮಾತನಾಡಿ, ರಿಕ್ಷಾ ಚಾಲಕರ ಸಮಯೋಚಿತ ಕಾರ್ಯ, ಸಂಘಟನೆಯ ಬದ್ಧತೆಗಾಗಿ ಈ ಕಾರ್ಯಕ್ರಮ. ಬದುಕು ನೀಡಿದ ರಿಕ್ಷಾ, ತನ್ನ ಪ್ರಾಣ ಲೆಕ್ಕಿಸದೆ ವಿಶ್ವನಾಥ್ ಅವರು ತೋರಿದ ಕಾಳಜಿ ಮಾದರಿ ಎಂದರು.

ಸನ್ಮಾನಿತ ವಿಶ್ವನಾಥ್ ಪೂಜಾರಿ ಮಾತನಾಡಿ, ಅಪಘಾತ ಆದಾಗ ವಿಡಿಯೊ ಮಾಡುವ ಮೊದಲು ಗಾಯಾಳುವನ್ನು ಬದುಕಿಸಿ ಮಾನವೀಯತೆ ತೋರುವುದೇ ಮನುಜಧರ್ಮ ಎಂದರು.

ರಿಕ್ಷಾ ಚಾಲಕ ಮಾಲೀಕರ ಸಂದ ಅಧ್ಯಕ್ಷ ದೀಪಕ್ ರಾಜ್ ಕೋಡಂಗಲ್ಲು, ಹಿಂದು ಜಾಗರಣ ವೇದಿಕೆಯ ತಾಲೂಕು ಸಂಯೋಜಕ ಹರೀಶ್ಚಂದ್ರ ಕೆ.ಸಿ., ವಾಜಿ ಅಧ್ಯಕ್ಷ ಸಂದೀಪ್ ಹೆಗ್ಡೆ, ಸಹ ಸಂಯೋಜಕ ಶರತ್ ಮಿಜಾರು, ಸಂತೋಷ್ ಜೈನ್, ದರೆಗುಡ್ಡೆ ಗ್ರಾ.ಪಂ. ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುವಾರ್ ಪ್ರಸಾದ್, ಭಾರತೀಯ ಮಜದೂರು ಸಂಘದ ಅಧ್ಯಕ್ಷ ರಾಜೇಶ್ ಸುವರ್ಣ ಉಪಸ್ಥಿತರಿದ್ದರು. ಹಿಂಜಾವೇ ಜಿಲ್ಲಾ ಪ್ರಮುಖ್ ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net