

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಉದ್ಯಾವರ ಮಾಡ ಪಕ್ಕದಲ್ಲಿ ರಸ್ತೆಯಂಚಿನ ಅಂಗಡಿಯ ಜ್ಯೂಸ್ ವ್ಯಾಪಾರಿ ಸುರೇಂದ್ರ ಕೋಟ್ಯಾನ್ ಅವರನ್ನು, ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಪದಾಧಿಕಾರಿಗಳು ವಾಚನಾ ದಿನಾಚರಣೆ ಅಂಗವಾಗಿ ಗೌರವಿಸಿದರು.
ಸುರೇಂದ್ರ ಕೋಟ್ಯಾನ್ ತಮ್ಮ ತಂಪುಪಾನೀಯ ಅಂಗಡಿಯನ್ನೇ ಗ್ರಂಥಾಲಯವನ್ನಾಗಿ ಮಾಡಿಕೊಂಡಿದ್ದಾರೆ. ಜೀವನ ನಿರ್ವಹಣೆಗಾಗಿ ಕಬ್ಬಿನ ಜ್ಯೂಸ್ ಮಾರಾಟ ಮಾಡುವ ಅವರು, ತಮ್ಮ ಅಂಗಡಿ ಬಳಿ ಗ್ರಂಥಾಲಯವೊಂದನ್ನು ನಿರ್ಮಿಸಿ ಅಲ್ಲಿ ಪುಸ್ತಕಗಳನ್ನೆಲ್ಲ ತಂದಿಟ್ಟಿದ್ದಾರೆ.
ಪುಸ್ತಕ ಬಯಸಿ ಬರುವ ಓದುಗರನ್ನು ಪ್ರತಿಸಲ ಮನೆಗೆ ಕರೆದೊಯ್ದು ತೋರಿಸುವ ಬದಲು ಅಂಗಡಿಯಲ್ಲಿಟ್ಟುಕೊಂಡರೆ ಓದುಗರಿಗೂ ಮತ್ತು ವ್ಯಾಪಾರಕ್ಕೂ ಎರಡಕ್ಕೂ ಅನುಕೂಲವೆಂದು ಗ್ರಂಥಾಲಯ ತೆರೆದಿದ್ದಾರೆ. ಸಂಘ-ಸಂಸ್ಥೆಗಳು ಒಂದಷ್ಟು ಕಪಾಟುಗಳನ್ನು ಒದಗಿಸಿ ಅವರಿಗೆ ಸಹಕರಿಸಿವೆ. ಕಿತ್ತಳೆ ಮಾರಿ ಶಾಲೆ ಕಟ್ಟಿದ ಪದ್ಮಶ್ರೀ ಹರೇಕಳ ಅವರ ಹಾಜಬ್ಬ ಗ್ರಂಥಾಲಯ ಉದ್ಘಾಟಿಸಿದ್ದರು.
ನಿಯೋಗದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾರ್ಯದರ್ಶಿ ಸಂಧ್ಯಾಗೀತಾ ಬಾಯಾರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಖಿಲೇಶ್ ನಗುಮುಗಂ, ಗೋವಿಂದ ಭಟ್ ಗಿರಿ, ಮರಿಯ, ಸುಚಿತ್ರ, ಪ್ರತಿಕ್ ಎ.ಬದಿಯಡ್ಕ ಮೊದಲಾದವರು ಉಪಸ್ಥಿತರಿದ್ದರು.