

ಮಂಡ್ಯ: ತತ್ವಪದ ಗಾಯಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಸರಾಳಿನ ತಂಬೂರಿ ಜವರಯ್ಯ ಅವರ ಸೇವೆಯನ್ನು ಸದಾ ಸ್ಮರಣೀಯವಾಗಿಸಲು ಹಾಗೂ ಮುಂದಿನ ಪೀಳಿಗೆಗೆ ತಲುಪಿಸುವ ಸಲುವಾಗಿ ಪ್ರತಿವರ್ಷ ತತ್ವಪದ ಗಾಯನ ಸ್ಪರ್ಧೆ ಆಯೋಜಿಸುವಂತಾಗಬೇಕು ಎಂದು ಜಾನಪದ ವಿದ್ವಾಂಸ ಪ್ರೊ.ವ.ನಂ.ಶಿವರಾಮು ಸಲಹೆ ನೀಡಿದರು.
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದ ಪಕ್ಕದಲ್ಲಿರುವ ಹೊಂಬೇಗೌಡ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕ ಹಾಗೂ ಜಿಲ್ಲಾ ಯುವ ಪರಿಷತ್ ವತಿಯಿಂದ ಆಯೋಜಿಸಿದ್ದ ತಂಬೂರಿ ಜವರಯ್ಯ ಅವರ ಶ್ರದ್ಧಾಂಜಲಿ ಹಾಗೂ ನುಡಿನಮನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಕಾಡೆಮಿ ಹಾಗೂ ಪರಿಷತ್‌ಗಳು ಜಾನಪದ ಕಲಾವಿದರ ಸಂಕಷ್ಟವನ್ನು ಅರಿತು ನೆರವಾಗಬೇಕು. ಜಾನಪದ ವಿದ್ವಾಂಸ ಎಚ್.ಎಲ್.ನಾಗೇಗೌಡರು, ಕಲಾವಿದರ ಸಂಕಷ್ಟಗಳಿಗೆ ಸ್ಪಂದಿಸುವ ಹೃದಯ ಶ್ರೀಮಂತಿಕೆ ಹೊಂದಿದ್ದರು. ಅದರ ಪರಿಣಾಮವಾಗಿಯೇ ಭಿಕ್ಷೆ ಬೇಡಿಕೊಂಡು ಜೀವನ ಮಾಡುತ್ತಿದ್ದ ತಂಬೂರಿ ಜವರಯ್ಯ ದಂಪತಿ ರಾಜ್ಯ ಮಾತ್ರವಲ್ಲದೆ, ಹಲವೆಡೆ ತಮ್ಮ ಸಿರಿಕಂಠದ ಮೂಲಕ ತತ್ವಪದಗಳನ್ನು ಪಸರಿಸಿದರು. ಕಲಾವಿದರು ಪ್ರಶಸ್ತಿಗಳನ್ನು ಕೊಡಿಸುವ ದಲ್ಲಾಳಿಗಳ ಬಗ್ಗೆ ಜಾಗರೂಕತೆಯಿಂದ ಇರಬೇಕು. ಕಲಾವಿದರನ್ನು ವಂಚಿಸಿ, ಹಣ ಮಾಡಿಕೊಳ್ಳುವವರಿಂದ ದೂರ ಉಳಿಯಬೇಕು. ಕಲೆಗಳನ್ನು ಉಳಿಸಿ, ಬೆಳೆಸುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಹಿರಿಯ ತತ್ವಪದ ಗಾಯಕ ಗೊರವಾಲೆ ರುದ್ರಪ್ಪ ಮಾತನಾಡಿ, ದಾನ, ಧರ್ಮ, ಪರೋಪಕಾರ ಮನೋಭಾವಗಳು ಇಂದು ಮಾಯವಾಗಿವೆ. ಮನುಷ್ಯ ಮೂರು ದಿನದ ಜೀವನ ವ್ಯಾಪಾರದಲ್ಲಿ ಒಳಿತನ್ನು ಮಾಡಿ, ಮುಕ್ತಿ ಸಂಪಾದಿಸಬೇಕು ಎಂದು ಅಭಿಪ್ರಾಯಿಸಿದರು.
ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ಬಿ.ಆರ್.ಅನಿಲ್ಕುಮಾರ್ ಮತ್ತು ಮೈಸೂರು ಮಹಾರಾಣಿ ಕಾಲೇಜಿನ ಪ್ರಾಧ್ಯಾಪಕಿ ಡಾ.ದಿವ್ಯಜ್ಯೋತಿ, ಹಿರಿಯ ರಂಗಕರ್ಮಿ ಸಂಪಳ್ಳಿ ಬಸವರಾಜು, ಯುವ ಸಂಘಟಕ ಡಿ.ಎಲ್.ಶಂಕರಲಿಂಗೇಗೌಡ ಮಾತನಾಡಿದರು.
ಬಸರಾಳು ಗ್ರಾ.ಪಂ ಅಧ್ಯಕ್ಷೆ ಸ್ವರ್ಣಗೌರಿ, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಕಾರಸವಾಡಿ ಮಹದೇವು, ಕೀಲಾರ ಕೃಷ್ಣೇಗೌಡ, ಜಾನಪದ ಪರಿಷತ್‌ನ ಪದಾಧಿಕಾರಿಗಳಾದ ರಾಜುಸ್ವಾಮಿ, ದೇವರಾಜ್ ಕೊಪ್ಪ, ಹನಿಯಂಬಾಡಿ ಶೇಖರ್, ಗೊರವಾಲೆ ಚಂದ್ರಶೇಖರ್ ಇತರರಿದ್ದರು.
ಇದೇ ವೇಳೆ ಬೋರಮ್ಮ ತಂಬೂರಿ ಜವರಯ್ಯ ಅವರನ್ನ ಗೌರವಿಸಲಾಯಿತು. ಕೀಲಾರದ ಸಿ.ಆರ್.ಸಂಜೀವಯ್ಯ, ಮಲ್ಲನಾಯಕನಕಟ್ಟೆ ಸಾಕಮ್ಮ, ಕಾರಸವಾಡಿಯ ಸುನೀತಾ ತಂಡ ತತ್ವಪದ ಗಾಯನವನ್ನು ಪ್ರಸ್ತುತಪಡಿಸಿದರು.