

ಮೈಸೂರು: ರಾಮಕೃಷ್ಣ ಮಹಾಸಂಘದ 16ನೇ ಅಧ್ಯಕ್ಷ ಸ್ವಾಮಿ ಸ್ಮರಣಾನಂದಜೀ ಮಹಾರಾಜ್ ಅವರಿಗೆ ನಗರದ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಭಾನುವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಸ್ವಾಮಿ ಮಹಾಮೇಧಾನಂದಜೀ ಮಹಾರಾಜ್ ಮಾತನಾಡಿ, ಜೀವನದಲ್ಲಿ ಉತ್ತಮ ಉದ್ದೇಶಗಳನ್ನು ಇಟ್ಟುಕೊಂಡು ಉದ್ದೇಶ ಸಾಧನೆಗಾಗಿ ಶ್ರಮಿಸಬೇಕು ಎಂಬುದು ಸ್ವಾಮಿ ಸ್ಮರಣಾನಂದಜೀ ಮಹಾರಾಜ್ ಅವರ ಧ್ಯೇಯವಾಗಿತ್ತು. ಅವರದ್ದು ಅತ್ಯಂತ ಸರಳ ಜೀವನವಾಗಿತ್ತು. ಅದೇ ರೀತಿ ಅವರ ವ್ಯಕ್ತಿತ್ವವೂ ಅತ್ಯಂತ ಸರಳವಾಗಿತ್ತು. ಅವರು ಅಂಬಾಸಿಡರ್ ಕಾರು ಬಿಟ್ಟು ಬೇರೆ ಕಾರು ಬಳಸುತ್ತಲೇ ಇರಲಿಲ್ಲ. ಅವರು ಆದಷ್ಟು ಸರಳವಾಗಿ ಬದುಕಬೇಕು ಎಂದು ಬಯಸುತ್ತಿದ್ದರು. ಅಂಬಾಸಿಡರ್ ಕಾರೇ ಅವರಿಗೆ ಪ್ರಿಯವಾಗಿತ್ತು ಎಂದರು.
ಕಟ್ಟುನಿಟ್ಟಿನ ದಿನಚರಿ ಇಟ್ಟುಕೊಳ್ಳಬೇಕು ಎಂದು ಸ್ವಾಮಿ ಮಹಾಮೇಧಾನಂದಜೀ ಮಹಾರಾಜ್ ಹೇಳುತ್ತಿದ್ದರು. ಕಟ್ಟುನಿಟ್ಟಿನ ದಿನಚರಿ ಇಟ್ಟುಕೊಳ್ಳದೆ ಇದ್ದರೆ ಉದ್ದೇಶಿತ ಗುರಿ ಸಾಧನೆ ಸಾಧ್ಯವಿಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು. ಪ್ರತಿಯೊಬ್ಬರು ಗುರುವಿನ ಮಾರ್ಗದರ್ಶನದಲ್ಲಿ ಸಾಗಬೇಕು ಹಾಗೂ ಸೇವಾ ಕಾರ್ಯದಲ್ಲಿ ತೊಡಗಬೇಕು ಎಂಬುದು ಅವರ ಬದುಕಿನ ಧ್ಯೇಯವಾಗಿತ್ತು. ಅವರು ಅದೇ ರೀತಿ ಬದುಕಿದರು ಎಂದು ಸ್ಮರಿಸಿದರು.
ನಗರದ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಮಾತನಾಡಿ, ರಾಮಕೃಷ್ಣ ಮಹಾಸಂಘವು ತ್ಯಾಗ, ಸೇವೆ ಮತ್ತು ಆಧ್ಯಾತ್ಮಿಕ ಸಾಕ್ಷಾತ್ಕಾರದ ಸಂಘವಾಗಿದ್ದು, ಇಂತಹ ಸಂಘದ 16ನೇ ಅಧ್ಯಕ್ಷರಾಗಿ ಸ್ವಾಮಿ ಸ್ಮರಣಾನಂದಜೀ ಮಹಾರಾಜ್ ಸೇವೆ ಸಲ್ಲಿಸಿದರು. ಅವರು ಅತ್ಯಂತ ಸರಳವಾದ ಆಧ್ಯಾತ್ಮಿಕ ವ್ಯಕ್ತಿತ್ವ ಹೊಂದಿದ್ದರು ಎಂದು ಹೇಳಿದರು.
ರಾಮಕೃಷ್ಣ ವಿದ್ಯಾಶಾಲೆ ಮುಖ್ಯಸ್ಥರಾದ ಶ್ರೀ ಸ್ವಾಮಿ ಯುಕ್ತೇಶಾನಂದ ಮಹಾರಾಜ್ ಮಾತನಾಡಿದರು. ಶ್ರದ್ಧಾಂಜಲಿ ಕಾರ್ಯಕ್ರಮದ ಅಂಗವಾಗಿ ಆಶ್ರಮದಲ್ಲಿ ಬೆಳಗ್ಗೆ ವಿಶೇಷ ಪೂಜೆ, ಭಜನೆ, ಆರತಿ ಮತ್ತು ಪುಷ್ಪಾಂಜಲಿ, ಪ್ರಸಾದ ವಿತರಣೆ ಕಾರ್ಯಕ್ರಮ ನೆರವೇರಿತು.