

ಮಂಡ್ಯ: ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಯ ಹಾದಿಯಲ್ಲಿ ಮುನ್ನಡೆದು ಸ್ವಜನ ಪಕ್ಷಪಾತ ಇಲ್ಲದೆ ಯಾವುದೇ ಕಪ್ಪು ಚುಕ್ಕೆ ಇಲ್ಲದ ಸ್ವಚ್ಛ ರಾಜಕಾರಣ ಮಾಡಿದ ಕೀರ್ತಿ ಶ್ರೀನಿವಾಸ್ ಪ್ರಸಾದ್ ಅವರಿಗೆ ಸಲ್ಲುತದೆ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಹೇಳಿದರು.
ನಗರದ ಗಾಂಧಿಭವನದಲ್ಲಿ ಶ್ರೀನಿವಾಸ್ ಪ್ರಸಾದ್ ಅಭಿಮಾನಿಗಳ ಬಳಗ, ಸುಂಡಳ್ಳಿ ನಾಗರಾಜ್‌ಅಭಿಮಾನಿ ಬಳಗದಿಂದ ಮಂಗಳವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ಬಂದಾಗ ಸ್ವಪಕ್ಷದ ನಾಯಕರ ವಿರುದ್ಧ ತಿರುಗಿ ಬೀಳುತ್ತಿದ್ದ ಸಂಸದ ಶ್ರೀನಿವಾಸ್ ಪ್ರಸಾದ್ ಅವರಿಗೆ ರಾಜಕೀಯದ ಹಾದಿಯಲ್ಲಿ ಪಕ್ಷ ಮುಖ್ಯವಾಗಿರಲಿಲ್ಲ ಎಂದರು.
ಶ್ರೀನಿವಾಸ್ ಪ್ರಸಾದ್ ಅವರು ರಾಜಕೀಯ ಜೀವನದಲ್ಲಿ ಅಂಬೇಡ್ಕರ್ ಆಶಯ ಮೈಗೂಡಿಸಿಕೊಂಡಿದ್ದರು. ಮಾತ್ರವಲ್ಲದೆ ಅಂಬೇಡ್ಕರ್ ಅವರಂತೆ ಜನಸಾಮಾನ್ಯರಲ್ಲಿ ಹೋರಾಟದ ಕಿಚ್ಚು ಹಚ್ಚಿದವರು. ಸಮುದಾಯದ ಹಿತ ಕಾಪಾಡಲು ಸದಾಕಾಲ ಮುಂದಿದ್ದರು. ಆದರೆ ಯಾವುದೇ ಜಾತಿ, ಧರ್ಮಕ್ಕೆ ಸೀಮಿತರಾಗಿರಲಿಲ್ಲ. ಬದಲಾಗಿ ಎಲ್ಲಾ ವರ್ಗಕ್ಕೂ ಸಾಮಾಜಿಕ ನ್ಯಾಯ, ನಾಯಕತ್ವವನ್ನು ಕೊಟ್ಟವರು. ಇಂತಹವರು ಇಂದಿನ ರಾಜಕಾರಣಿಗಳಿಗೆ ಆದರ್ಶಪ್ರಾಯ. ಅವರ ಸ್ವಾಭಿಮಾನ ನಮ್ಮೆಲ್ಲರಿಗೂ ದಾರಿದೀಪ ಆಗಲಿ ಎಂದು ಆಶಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್.ವೀರಯ್ಯ ಮಾತನಾಡಿ, ಶ್ರೀನಿವಾಸ್ ಪ್ರಸಾದ್ ಅವರ ಗುಣ, ನಡತೆ, ಸೇವೆ ಸ್ವಾಭಿಮಾನದ ಗಣತಿಯಾಗಿದೆ. ಅವರು ಎಂದಿಗೂ ಸ್ವಾಭಿಮಾನ ಬಿಟ್ಟು ರಾಜಕಾರಣ ಮಾಡಿದವರಲ್ಲ. ಪಕ್ಷ ರಾಜಕಾರಣ ಅವರಿಗೆ ಮುಖ್ಯವಾಗಿರಲಿಲ್ಲ. ಬದಲಾಗಿ ಸಮಾಜದ ಹಿತಕ್ಕಾಗಿ ಹಲವು ಪಕ್ಷವನ್ನು ತೊರೆದು ಬಂದಿದ್ದರು. ಬಲಿಷ್ಠ ವರ್ಗದ ವಿರುದ್ಧ ರಾಜಕಾರಣ ಮಾಡಿದವರು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಎಸ್ಸಿ ಎಸ್ಟಿ ನಿವೃತ್ತ ನೌಕರರ ಸಂಘದ ಗುರುಮೂರ್ತಿ, ಚಂದ್ರಹಾಸ್, ಪ್ರೊ, ಚಂದ್ರಶೇಖರ್, ಸುಂಡಳ್ಳಿ ರಾಜು, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಸಂದೇಶ್, ಮೈಸೂರು ಪಾಲಿಕೆ ಮಾಜಿ ಸದಸ್ಯ ಸಿದ್ದಪ್ಪ, ನಗರಸಭೆ ಸದಸ್ಯ ಶ್ರೀಧರ್, ಗೆಜ್ಜಲಗೆರೆ ಗಂಗಾಧರ್, ಕೊಮ್ಮೇರಹಳ್ಳಿ ಸೀತಾರಾಮು ಇತರರಿದ್ದರು.