ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

Sathyanarayana
Published on

ಬೆಂಗಳೂರು: ನಾಡಿನ ಹಿರಿಯ ಪತ್ರಕರ್ತರಾದ ಕೆ.ಸತ್ಯನಾರಾಯಣ ಅವರಿಗೆ ನಗರದ ಪ್ರೆಸ್ ಕ್ಲಬ್​ ಸಭಾಭವನದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರೆಸ್ ಕ್ಲಬ್ ಆಫ್ ಬೆಂಗಳೂರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) , ಕರ್ನಾಟಕ ಮಾಧ್ಯಮ ಅಕಾಡೆಮಿ, ಬೆಂಗಳೂರು ವರದಿಗಾರರ ಕೂಟ, ಕರ್ನಾಟಕ ಪತ್ರಕರ್ತರ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ಸಭೆಯಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅನೇಕ ಹಿರಿಯ ಪತ್ರಕರ್ತರು ಅವರ ಒಡನಾಟವನ್ನು ಸ್ಮರಿಸಿಕೊಂಡು, ಅವರ ಆದರ್ಶದ ಹಾದಿಯಲ್ಲಿ ನಡೆಯಲು ಕಂಕಣಬದ್ಧರಾಗುವಂತೆ ಕರೆ ನೀಡಿದರು.

ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಅಂದಿನಿಂದ ಇಂದಿನವರೆಗೂ ಸತ್ಯನಾರಾಯಣ ಅವರು ನಡೆದು ಬಂದ ದಾರಿ ಹಾಗೂ ಅವರು ತಮ್ಮ ವೃತ್ತಿಜೀವನದಲ್ಲಿ ಬದ್ಧತೆಯನ್ನು ಕಾಪಾಡಿಕೊಂಡು ಬಂದಿದ್ದು ವಿಶೇಷ ಎಂದರು. ಹಿರಿಯ ಚೇತನ ಸತ್ಯನಾರಾಯಣ ಅವರಿಗೆ ನಮ್ಮ ಸಂಘದ ವತಿಯಿಂದ ನಡೆಸಿದ ಹಿರಿಯ ಪತ್ರಕರ್ತರನ್ನು ಗೌರವಿಸುವ ಮನೆಯಂಗಳದಲ್ಲಿ ಕಾರ್ಯಕ್ರಮದಲ್ಲಿ ಅವರನ್ನು ಅಭಿನಂದಿಸಿದ್ದು ನಮಗೆ ಹೆಮ್ಮೆ ಎನಿಸುತ್ತದೆ. ಅಂದು ಅವರು ಅನೇಕ ಮಹತ್ವಪೂರ್ಣ ವಿಚಾರಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದು ಮರೆಯಲಾಗದ ಘಟನೆ ಎಂದರು.

ಹಿರಿಯರಾದ ನಾಗಮಣಿ ಎಸ್.ರಾವ್, ಪಿ.ರಾಮಯ್ಯ, ಡಿ.ಉಮಾಪತಿ, ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಸದಾಶಿವ ಶೆಣೈ ಮುಂತಾದವರು ಸತ್ಯನಾರಾಯಣ ಅವರ ಒಡನಾಟದ ಕುರಿತು ಮಾತನಾಡಿದರು.

ಶ್ರದ್ದಾಂಜಲಿ ಸಭೆಯಲ್ಲಿ ಹಿರಿಯ ಪತ್ರಕರ್ತರಾದ ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್, ಕನ್ನಡಪ್ರಭ ಸಂಪಾದಕ ರವಿ ಹೆಗಡೆ, ಈಶ್ವರ ದೈತೋಟ, ಆಶಾ ದೈತೋಟ, ಡಿ.ಮಹಾದೇವಪ್ಪ, ವೆಂಕಟನಾರಾಯಣ, ಕೆ.ಶೇಷಚಂದ್ರಿಕಾ, ಬಾಲಸುಬ್ರಹ್ಮಣ್ಯ, ಐಎಫ್​ಡಬ್ಲ್ಯುಜೆ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಕೆಯುಡಬ್ಲ್ಯುಜೆ ಖಜಾಂಚಿ ಎಂ.ವಾಸುದೇವ ಹೊಳ್ಳ, ನಗರ ಘಟಕದ ಅಧ್ಯಕ್ಷ ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೇಕಟ್ ಮುಂತಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net