ಹಿರಿಯ ಕಲಾವಿದರಿಗೆ ಗೌರವ ಸಮರ್ಪಣೆ 7 ರಂದು

Deepak
Published on

ಯಲ್ಲಾಪುರ: ಕರ್ನಾಟಕ ಕಲಾ ಸನ್ನಿಧಿ ಸಂಸ್ಥೆ ವತಿಯಿಂದ ಅ.7 ರಂದು ಮಧ್ಯಾಹ್ನ 3 ಕ್ಕೆ ತಾಲೂಕಿನ ಗೋಪಾಲಕೃಷ್ಣ ದೇವಸ್ಥಾನ ಅಣಲಗಾರದಲ್ಲಿ ಹಿರಿಯ ಕಲಾವಿದರಿಗೆ ಗೌರವ ಸಮರ್ಪಣೆ ಮತ್ತು ಗಾನ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸನ್ನಿಧಿಯ ಕಾರ್ಯದರ್ಶಿ ದೀಪಕ ಭಟ್ಟ ಕುಂಕಿ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಕ್ಷಗಾನ ಸೇರಿದಂತೆ ವಿವಿಧ ಕಲಾಪ್ರಕಾರದಲ್ಲಿ ಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸಿ, ನೈಪಥ್ಯಕ್ಕೆ ಸರಿದ ಕಲಾವಿದರನ್ನು ಗುರುತಿಸಿ, ಗೌರವಿಸಬೇಕೆನ್ನುವ ನೆಲೆಯಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಯಾವ ಸೌಲಭ್ಯ ಇಲ್ಲದ ಕಾಲದಲ್ಲಿ ಕಲಾರಾಧನೆ ಮಾಡಿಕೊಂಡು ಬಂದ ಉತ್ತರ ಕನ್ನಡ ಜಿಲ್ಲೆಯ ಸುಮಾರು 50 ಕಲಾವಿದರನ್ನು ಸಂದರ್ಶಿಸಿ, ಸಾಮಾಜಿಕ ಜಾಲತಾಣದಲ್ಲಿ ಲೇಖನವಾಗಿ ಪ್ರಕಟಿಸಿ, ಅವರ ಕಲಾ ಸೇವೆಯನ್ನು ಸಮಾಜಕ್ಕೆ ಪರಿಚಯಿಸಲಾಗಿದೆ.

ಲೇಖನದಲ್ಲಿ ಪರಿಚಿತರಾದ 50 ಕಲಾವಿದರಿಗೆ ಅ. 7ರ ಕಾರ್ಯಕ್ರಮದಲ್ಲಿ ಗೌರವ ಸಮರ್ಪಿಸಲಾಗುತ್ತಿದೆ. ಅವರಲ್ಲಿ ಎಂಟು ಕಲಾವಿದರಿಗೆ ಮರಣೋತ್ತರವಾಗಿ ಗೌರವ ಸಮರ್ಪಿಸಲಾಗುತ್ತಿದ್ದು, ಅವರ ಪರವಾಗಿ ಕುಟುಂಬದವರನ್ನು ಗೌರವಿಸಲಾಗುತ್ತದೆ. 42 ಕಲಾವಿದರನ್ನು ಗೌರವಿಸಲಾಗುತ್ತದೆ. ಅವರ ಕಲಾ ಸೇವೆಯನ್ನು ದಾಖಲೀಕರಿಸುವ ಸಲುವಾಗಿ ಲೇಖನಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಉದ್ದೇಶ ಹೊಂದಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ಮೈತ್ರಿ ಕಲಾ ಬಳಗದ ಅಧ್ಯಕ್ಷ ಗಣಪತಿ ಕಂಚಿಪಾಲ, ದೇವಸ್ಥಾನದ ಅಧ್ಯಕ್ಷ ಎನ್.ಆರ್. ಭಟ್ಟ ಬಿದ್ರೆಪಾಲ, ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್. ಭಟ್ಟ ಆನಗೋಡ ಭಾಗವಹಿಸಲಿದ್ದಾರೆ. ನಂತರ ಸನ್ಮಾನಿತರಿಂದ ಗಾನ ಸಂಜೆ ಕಾರ್ಯಕ್ರಮ ನಡೆಯಲಿದೆ ಎಂದರು.
ಸಂಘಟನೆಯ ಪ್ರಮುಖರಾದ ಶ್ರೀಧರ ವೈದಿಕ, ದಿನೇಶ ಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net