

ಗಂಗಾವತಿ: ಪೌರಾಣಿಕ ಹಿನ್ನೆಲೆಯ ಅಯೋಧ್ಯೆಯಷ್ಟೇ ಪ್ರಾಮುಖ್ಯತೆ ಹೊಂದಿದ ಅಂಜನಾದ್ರಿ ಕ್ಷೇತ್ರದಿಂದ ಸನಾತನ ಧರ್ಮ ಸಂರಕ್ಷಿಸುವ ಕೆಲಸವಾಗಬೇಕಿದ್ದು, ಪ್ರತಿಯೊಬ್ಬರು ಕೈಜೋಡಿಸಬೇಕಿದೆ ಎಂದು ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ನಗರದ ಲಲಿತಮಹಲ್ ಸಭಾಂಗಣದಲ್ಲಿ ಸ್ಥಳೀಯ ಮುಖಂಡರು ಮಂಗಳವಾರ ಆಯೋಜಿಸಿದ್ದ ಸಪ್ತಶ್ರೀಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಧರ್ಮ ಉಳಿಸುವ ಕಾರ್ಯ ಮಠಾಧೀಶರು ಮತ್ತು ಸಾರ್ವಜನಿಕರಿಂದಾಗಬೇಕಿದ್ದು, ಯುವಕರಿಗೆ ಸಂಸ್ಕಾರ ಕೊಡಬೇಕಿದೆ. ಸನಾತನ ಧರ್ಮ ಸಂರಕ್ಷಣೆ ಮೂಲಕ ದೇಶ ವನ್ನು ಸುಭಿಕ್ಷೆಯಿಂದಿಡಲು ಸಾಧ್ಯವಿದ್ದು, ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳು ಹೆಚ್ಚಾಗಬೇಕಿದೆ ಎಂದರು.
ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಜಿಪಂ ಮಾಜಿ ಸದಸ್ಯ ಎಚ್.ಎಂ.ಸಿದ್ರಾಮಯ್ಯಸ್ವಾಮಿ ಮಾತನಾಡಿ, ಮಹಾತಪಸ್ವಿ ಚಿದಾನಂದ ಅವಧೂತರನ್ನು ಸಾಕ್ಷಾತ್ಕರಿಸಿದ ಸಿಂಧನೂರು ತಾಲೂಕಿನ ಅಂಭಾಮಠದ ಜೀರ್ಣೋದ್ಧಾರಕ್ಕಾಗಿ ಆಗಮಿಸಿರುವ ವಿವಿಧೆಡೆಯ ಸಪ್ತಶ್ರೀಗಳು ಅಂಜನಾದ್ರಿ ಕ್ಷೇತ್ರಕ್ಕೆ ಬಂದಿರುವ ಈ ಭಾಗದ ಜನರ ಸೌಭಾಗ್ಯ. ಸನಾತನ ಧರ್ಮ ಉಳಿವಿಗಾಗಿ ಶ್ರಮಿಸುತ್ತಿರುವ ಶ್ರೀಗಳೊಂದಿಗೆ ಭಕ್ತರು ಕೈಜೋಡಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಜಂಗಮ ಸಮಾಜ ಮತ್ತು ಸ್ಥಳೀಯ ಮುಖಂಡರಿಂದ ಸಪ್ತಶ್ರೀಗಳನ್ನು ಸನ್ಮಾನಿಸಲಾಯಿತು. ಹಾಸನದ ಅದಿಚುಂಚನಗಿರಿ ಶಾಖಾಮಠದ ಶಂಭುನಾಥ ಸ್ವಾಮೀಜಿ, ಚಿತ್ರದುರ್ಗದ ಶಿವಲಿಂಗಾನಂದ ಸ್ವಾಮೀಜಿ, ಶೃಂಗೇರಿಯ ಗುಣನಾಥ ಸ್ವಾಮೀಜಿ, ಕಬ್ಬಲಿಯ ಶಿವಪುತ್ರ ಸ್ವಾಮೀಜಿ, ಅನವಾಲದ ಕೈಲಾಸಪತಿ ಸ್ವಾಮೀಜಿ, ತೊಂಡಿಕಟ್ಟಿಯ ವೆಂಕಟೇಶ ಮಹಾರಾಜ್, ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಶರಣಪ್ಪ ದೊಡ್ಡಮನಿ, ಮುಖಂಡರಾದ ಎಚ್.ಎಂ.ಬಸವರಾಜ ಸ್ವಾಮಿ, ಟಿ.ಲಕ್ಷ್ಮೀನಾರಾಯಣ, ಎಚ್.ಎಂ. ವಿರೂಪಾಕ್ಷಯ್ಯಸ್ವಾಮಿ, ಧರ್ಮಣ್ಣ ಇತರರಿದ್ದರು.