

ಕುಶಾಲನಗರ:
ಉದ್ಯಮವನ್ನು ಕೇವಲ ಲಾಭಕ್ಕಾಗಿ ಮಾಡದೇ ಸೇವೆಗಾಗಿ ಮೀಸಲು ಇಟ್ಟಿದ್ದ ಕುಟುಂಬದ ಅನರ್ಘ್ಯ ರತ್ನ ರತನ್ ಟಾಟಾ. ಅವರು ವಿಶ್ವದ ಎಲ್ಲ ಉದ್ಯಮಿದಾರರಿಗೆ ಮಾದರಿಯಾಗಿ ನಿಲ್ಲುವ ಶ್ರೇಷ್ಠ ಮಾನವ ಎಂದು ಕುಶಾಲನಗರ ಕೈಗಾರಿಕೋದ್ಯಮಿಗಳು ಮತ್ತು ವೃತ್ತಿನಿರತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣ ಕುಮಾರ್ ಹೇಳಿದರು. ಸಂಘದ ಸಭಾಂಗಣದಲ್ಲಿ ಗುರುವಾರ ಚೇಂಬರ್ ಆಫ್ ಕಾಮರ್ಸ್ ಮತ್ತು ಕೈಗಾರಿಕೋದ್ಯಮಿಗಳ ಸಹಕಾರ ಸಂಘದ ಆಶ್ರಯಲ್ಲಿ ಆಯೋಜಿಸಿದ್ದ ರತನ್ ಟಾಟಾ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ದೇಶದ 140 ಕೋಟಿ ಜನರು ಟಾಟಾ ಸಮೂಹ ಸಂಸ್ಥೆಯ ಉತ್ಪನ್ನಗಳನ್ನು ಬಳಸಿಯೇ ತಮ್ಮ ನಿತ್ಯ ಜೀವನ ಸಾಗಿಸಿಕೊಳ್ಳಬೇಕು. ಅಷ್ಟು ದೊಡ್ಡ ಮಟ್ಟದಲ್ಲಿ ತಮ್ಮ ವ್ಯಾಪಾರ ಕ್ಷೇತ್ರವನ್ನು ವಿಸ್ತರಿಸಿಕೊಂಡು ಯಶಸ್ವಿ ಮಾಡಿಕೊಳ್ಳುವ ಕೋಟ್ಯಂತರ ಜನರಿಗೆ ಉದ್ಯೋಗ ನೀಡಿದ್ದಾರೆ ಎಂದರು.
ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಬಾಬು ಮಾತನಾಡಿ ದೇಶ ಯಾವ ಕ್ಷೇತ್ರದಲ್ಲೂ ಬೇರೆ ದೇಶಗಳನ್ನು ಅವಲಂಬಿಸಬಾರದು ಎನ್ನುವ ದೇಶ ಪ್ರೇಮ ಹೊಂದಿದ್ದ ರತನ್ ಟಾಟಾ, ಹಲವು ದೊಡ್ಡ ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ಸ್ವದೇಶಿ ವಸ್ತುಗಳನ್ನು ನಿರ್ಮಿಸುವ ಕಾರ್ಯಕ್ಕೆ ಮುಂದಾದ ಶ್ರೇಷ್ಠ ದೇಶಾಭಿಮಾನಿ. ಕೈಗಾರಿಕಾ ವಲಯದ ಪಿತಾಮಹ ರತನ್ ಟಾಟಾ ಅವರಿಗೆ ಮರಣೋತ್ತರ ಭಾರತ ರತ್ನ ನೀಡಿ ಗೌರವಿಸಬೇಕು ಎಂದರು.
ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಆಧ್ಯಕ್ಷ ಬಿ.ಆರ್. ನಾಗೇಂದ್ರಪ್ರಸಾದ್ ಮಾತನಾಡಿ, ಆರ್ಥಿಕವಾಗಿ ದಿವಾಳಿಯಾಗಿದ್ದ ಏರ್ ಇಂಡಿಯಾ ವಿಮಾನ ಸಂಸ್ಥೆಯನ್ನು ಖರೀದಿಸುವ ಮೂಲಕ ಒಂದು ಸಂಸ್ಥೆಯ ಉಳಿವಿಗೆ ಪಣತೊಟ್ಟು ಯಶಸ್ವಿಯಾಗಿದ್ದರು. ಇಂತಹ ನೂರಾರು ಉದಾಹಣೆಗಳಿವೆ ಎಂದರು.
ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಆಧ್ಯಕ್ಷ ಕೆ.ಎಸ್. ನಾಗೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್, ಉದ್ಯಮಿ ಎಂ.ಕೆ.ದಿನೇಶ್ ಮಾತನಾಡಿದರು.
ಆರಂಭದಲ್ಲಿ ರತನ್ ಟಾಟಾ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಮೌನಾಚರಿಸುವ ಮೂಲಕ ರತನ್ ಟಾಟಾ ಅವರಿಗೆ ಗೌರವ ನಮನ ಸಲ್ಲಿಸಲಾಯಿತು.
ಸಹಕಾರ ಸಂಘದ ನಿರ್ದೇಶಕರಾದ ಡಿ.ವಿ.ರಾಜೇಶ್, ಬಿ.ರಾಮಕೃಷ್ಣಯ್ಯ, ಚೇಂಬರ್ ಖಜಾಂಚಿ ಎನ್.ವಿ.ಬಾಬು, ನಿರ್ದೇಶಕರಾದ ಬಿ.ಅಮೃತ್ ರಾಜ್, ಪುಂಡರೀಕಾಕ್ಷ, ರೂಪ ವಿನೋದ್, ಸೋಮಣ್ಣ ಇತರರು ಹಾಜರಿದ್ದರು.