ರಾಮಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್‌ಗೆ ಸನ್ಮಾನ

shashi s.mangalagar
ಶಶಿ ಎಸ್.ಕಾರ್ಯಕ್ರಮದ ವ್ಯವಸ್ಥಾಪಕ
Published on

ಶಿವಮೊಗ್ಗ: ಅಯೋಧ್ಯೆ ರಾಮಲಲ್ಲಾ ಮೂರ್ತಿ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಹಾಗೂ ಅಯೋಧ್ಯೆಯಲ್ಲಿ ರಥ ನಿರ್ಮಿಸಿದ ಶಿಲ್ಪಿ ರಾಜಗೋಪಾಲಾಚಾರ್ಯ ಅವರನ್ನು ವಿಶ್ವಕರ್ಮ ಯಕ್ಷಾಭಿಮಾನಿ ವೇದಿಕೆಯಿಂದ ಶಿವಮೊಗ್ಗದಲ್ಲಿ ಸನ್ಮಾನಿಸಲಾಗುವುದು ಎಂದು ಕಾರ್ಯಕ್ರಮದ ವ್ಯವಸ್ಥಾಪಕ ಶಶಿ ಎಸ್. ಮಂಗಳಗಾರ್ ಹೇಳಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಏ.7ರ ಸಂಜೆ 4ಕ್ಕೆ ಕಾರ್ಯಕ್ರಮ ಆಯೋಜಿಸಿದ್ದು, ಸಭಾ ಕಾರ್ಯಕ್ರಮವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಎಂ.ಕೆ.ರಮೇಶ್ ಆಚಾರ್ಯ ಉದ್ಘಾಟಿಸುವರು. ಹಿರಿಯ ಪತ್ರಕರ್ತ ಎಸ್.ಚಂದ್ರಕಾಂತ್ ಅಧ್ಯಕ್ಷತೆ ವಹಿಸುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಭಾವಯಾನ ವಿಶೇಷ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ಪರಮಪದ ತಂಡದ ರಾಮಚಂದ್ರ ಹಡಪದ್, ಆರ್.ಕೆ.ಸ್ಪರ್ಶ, ಶರಧಿ ಪಾಟೀಲ್ ಹಳೆಯ ಕನ್ನಡ, ಹಿಂದಿ ಚಿತ್ರಗೀತೆಗಳು ಹಾಗೂ ಭಾವಗೀತೆಗಳನ್ನು ಪ್ರಸ್ತುತಪಡಿಸುವರು. ಕಾರ್ಯಕ್ರಮಕ್ಕೆ ರಾಘವೇಂದ್ರ ಕಾಂಚನ್ ಅವರ ನವಿರಾದ ನಿರೂಪಣೆಯಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಸೇರಿದಂತೆ ಗಣ್ಯರು ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ತಿಳಿಸಿದರು. ಕಾರ್ಯಕ್ರಮದ ಆಯೋಜಕರಾದ ಮಂಜುನಾಥ್ ನವುಲೆ, ಎನ್.ವಿ.ಸಚಿನ್, ಎಸ್.ಸಂಜಯ್‌ಕುಮಾರ್ ಹಾಗೂ ಅಥರ್ವ ಸುದ್ದಿಗೋಷ್ಠಿಯಲ್ಲಿದ್ದರು.
ಉಚಿತ ಪ್ರವೇಶ ಪತ್ರ
:ವಿಶೇಷ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಮುಂಚಿತವಾಗಿ ಆಯೋಜಕರಿಂದ ಪ್ರವೇಶ ಪತ್ರ ಪಡೆಯಬೇಕು ಎಂದು ಶಶಿ ತಿಳಿಸಿದರು. ಉಚಿತ ಪ್ರವೇಶ ಪಾಸ್‌ಗಾಗಿ ದುರ್ಗಿಗುಡಿ ಗಾಯತ್ರಿ ಜ್ಯುವೆಲರ್ಸ್‌, ವಿವಿ ಜ್ಯುವೆಲರ್ಸ್‌, ಕುವೆಂಪು ರಸ್ತೆಯ ಡ್ರೆಸ್‌ಲೈನ್, ಗಾಂಧಿನಗರದ ವಿಧಾತ್ರಿ ಹೋಟೆಲ್, ಜೆಪಿಎನ್ ರಸ್ತೆಯ ಶುಭಂ ಹೋಟೆಲ್, ಜಯನಗರದ ಸಹ್ಯಾದ್ರಿ ಡ್ರಗ್ ಹೌಸ್‌ನಲ್ಲಿ ಸಂಪರ್ಕಿಸಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net