ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜವರಪ್ಪಗೆ ಸನ್ಮಾನ

IMG-20231118-WA0025
Published on

ಮೈಸೂರು: ಮಹಾಮಾರಿ ಕೋವಿಡ್ ಸಂದರ್ಭ ಪತ್ರಿಕಾ ವಿತರಕರ ಶ್ರಮ ಮತ್ತು ಕಾಳಜಿ ದಾಖಲಾರ್ಹ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹೇಳಿದರು.

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಮತ್ತು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಿಕಾ ವಿತರಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಪತ್ರಿಕಾ ವಿತರಕರು ಪತ್ರಿಕಾ ರಂಗದ ಪಿಲ್ಲರ್‌ಗಳು. ಕೋವಿಡ್ ವೇಳೆ ಪತ್ರಿಕೆ ಮುಟ್ಟಿದರೆ ಸೋಂಕು ಬರುತ್ತದೆ ಎನ್ನುವ ಆತಂಕ ವ್ಯಾಪಕವಾಗಿ ಹರಡಿದ್ದಾಗಲೂ ತಮ್ಮ ವೃತ್ತಿಪರತೆಯನ್ನು ಬಿಟ್ಟು ಕೊಡಲಿಲ್ಲ. ಎಂದಿನಂತೆ ಪತ್ರಿಕೆ ವಿತರಿಸಿ ಎದೆಗಾರಿಕೆ ಮೆರೆದರು ಎಂದು ಆ ಸಂದರ್ಭದ ಸಂಕಷ್ಟಗಳನ್ನು ವಿವರಿಸಿದರು.
ಪತ್ರಿಕಾ ವಿತರಕರ ಯೋಗಕ್ಷೇಮಕ್ಕಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಜತೆ ಚರ್ಚೆ ನಡೆಸುತ್ತೇನೆ. ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘಕ್ಕೆ 2 ಕೋಟಿ ರೂ. ಕೊಡಿಸಲು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಕಾರ್ಯರೂಪಕ್ಕೆ ತರಲು ಈಗಾಗಲೇ ಪ್ರಯತ್ನ ಆರಂಭಿಸಲಾಗಿದೆ. ವಿತರಕರ ಸಂಘಕ್ಕೆ ನಿವೇಶನ ಮತ್ತು ವಿತರಕರಿಗೆ ನಿವೇಶನ ಕೊಡಿಸಬೇಕು ಎನ್ನುವ ಬೇಡಿಕೆ ಕುರಿತಾಗಿಯೂ ಸರ್ಕಾರದ ಬಳಿ ಮನವಿ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.

ವಿತರಕರ ಸಂಖ್ಯೆ ದೊಡ್ಡದಿದೆ

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ರಾಜ್ಯದಲ್ಲಿ ಪತ್ರಿಕಾ ವಿತರಕರ ಸಂಖ್ಯೆ ದೊಡ್ಡದಾಗಿದೆ. ಪತ್ರಿಕೆ ಹಾಕುವ ಮೂಲಕ ಬದುಕು ಕಟ್ಟಿಕೊಂಡ ಪತ್ರಿಕಾ ವಿತರಕರು ನಮಗೆ ಆದರ್ಶಪ್ರಾಯರಾಗಿದ್ದಾರೆ. ಪತ್ರಿಕಾ ವಿತರಕರು ಸಾಂಘಿಕ ಶಕ್ತಿ ಮೂಲಕ ಮುಂದೆ ಬರಬೇಕು.ಕಾರ್ಯನಿರತ ಪತ್ರಕರ್ತರ ಸಂಘ ಪತ್ರಿಕಾ ವಿತರಕರಿಗೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.

ಶಾಸಕ ಕೆ.ಹರೀಶ್ ಗೌಡ ಮಾತನಾಡಿದರು. ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಿಕಾ ವಿತರಕ ಜವರಪ್ಪ ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರನ್ನು ಸನ್ಮಾನಿಸಲಾಯಿತು.


ರಾಜ್ಯ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಕೆ. ಶಂಭುಲಿಂಗ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಂಸ್ಥೆಯ ಅಧ್ಯಕ್ಷ ರಾಜಪ್ಪ, ಹಿರಿಯ ಪತ್ರಕರ್ತರಾದ ಸಿ.ಕೆ.ಮಹೇಂದ್ರ, ಎಸ್.ಟಿ.ರವಿಕುಮಾರ್, ರವಿ ಕೋಟಿ, ಎಸ್.ನಾಗಣ್ಣ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘ ಪದಾಧಿಕಾರಿಗಳ ಸಂಘದ ಅಧ್ಯಕ್ಷ ಜೆ.ಎಸ್. ಹೋಮದೇವ, ಉಪಾಧ್ಯಕ್ಷ ಎಂ.ನಾಗರಾಜ್, ಖಜಾಂಚಿ ಸಿ.ಡಿ.ಹರೀಶ್, ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net