ಪಂಡಿತ್ ರಾಜೀವ್ ತಾರಾನಾಥ್’ಗೆ ಶ್ರದ್ಧಾಂಜಲಿ

Tribute to Pandit Rajiv Taranath
Published on

ಮೈಸೂರು: ನಗರದ ಕೆಎಂಪಿಕೆ ಟ್ರಸ್ಟ್ ವತಿಯಿಂದ ಟ್ರಸ್ಟ್ ಆವರಣದಲ್ಲಿ ಗುರುವಾರ ಸಂಗೀತ ಮಾಂತ್ರಿಕ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಸಂತಾಪ ಸಭೆ ಏರ್ಪಡಿಸಲಾಗಿತ್ತು.

ಸಮಾಜ ಸೇವಕ ಕೆ.ರಘುರಾಮ್ ವಾಜಪೇಯಿ ಮಾತನಾಡಿ, ಮೈಸೂರು ಕಲಾವಿದರ ತವರೂರು. ಮೈಸೂರು ಮಹಾರಾಜರ ಕೊಡುಗೆಯಿಂದಾಗಿ ಜಿಲ್ಲೆಯಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಳು ಶಾಶ್ವತವಾಗಿ ನೆಲೆಯೂರಿತು. ಪಂಡಿತ್ ತಾರಾನಾಥ್ ಪುತ್ರ ಪಂಡಿತ್ ರಾಜೀವ್ ತಾರಾನಾಥ್ ಮೈಸೂರಿನ ಸಂಗೀತ ಪರಂಪರೆಗೆ ನೀಡಿದ ಕೊಡುಗೆ ಅಪಾರ ಎಂದರು.

ರಾಜೀವ್ ತಾರಾನಾಥ್ ಅವರನ್ನು ದೇಶ ವಿದೇಶದಲ್ಲೂ ಇಂದು ಸ್ಮರಿಸಲಾಗುತ್ತಿದೆ. ರಾಜ್ಯ ಹಾಗೂ ದೇಶದ ಕೀರ್ತಿಯನ್ನು ಅವರು ಹೆಚ್ಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಮೈಸೂರು ದಸರಾ ಸಂದರ್ಭದಲ್ಲಿ ರಾಜೀವ್ ತಾರಾನಾಥ್ ಅವರ ಸಂಗೀತ ಸೇವೆ ಸ್ಮರಿಸುವ ನಿಟ್ಟಿನಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಮತ್ತು ವಾದ್ಯ ಪರಿಕರಗಳ ಪ್ರದರ್ಶನಗಳನ್ನು ಆಯೋಜಿಸಲಿ ಎಂದು ಹೇಳಿದರು.

ಪ್ರಸಾದ್ ಸ್ಕೂಲ್ ಆಫ್ ರಿದಮ್ ಸಂಸ್ಥಾಪಕ ಡಾ.ರಾಘವೇಂದ್ರ ಪ್ರಸಾದ್ ಮಾತನಾಡಿ, ರಾಜೀವ್ ತಾರಾನಾಥ್ ಸಣ್ಣ ಮಕ್ಕಳಿಗೂ ಅರಿವಾಗುವ ರೀತಿಯಲ್ಲಿ ಸಂಗೀತ ಶಿಕ್ಷಣ ನೀಡುತ್ತಿದ್ದರು. ಹಿಂದುಸ್ತಾನಿ ಮಾತ್ರವಲ್ಲದೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಅರಿವು ಅವರಿಗಿತ್ತು ಎಂದರು.

ಹಿರಿಯ ತಬಲ ವಾದಕ ರಮೇಶ್ ದನ್ನೂರ್ ಮಾತನಾಡಿ, ರಾಜೀವ್ ತಾರಾನಾಥ್ ನಿಧನದಿಂದ ಹಿಂದುಸ್ತಾನಿ ಸಂಗೀತಕ್ಕೆ ದೊಡ್ಡ ನಷ್ಟವಾಗಿದೆ. ತಾರಾನಾಥ್ ಮೈಸೂರಿನಲ್ಲಿ ವಾಸವಾಗಿದ್ದರಿಂದ ಮೈಸೂರಿಗೆ ಹಿರಿಮೆ ಇತ್ತು. ಅವರೊಂದಿಗೆ ಹತ್ತು ವರ್ಷಗಳ ಒಡನಾಟ ಇತ್ತು ಎಂದು ಸ್ಮರಿಸಿದರು.

ಈ ಸಂದರ್ಭ ಹಿಂದುಸ್ತಾನಿ ಗಾಯಕ ಪ್ರಭುರಾವ್, ನಗರ ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಜೆಡಿಎಸ್ ನಗರ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net