ಶಿಸ್ತು, ಪ್ರಬುದ್ಧತೆಯ ಹೆಗ್ಗುರುತು ಎಸ್‌ಎಂಕೆ: ಎಸ್‌ಬಿಇಟಿ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ಬಣ್ಣನೆ

Tribute to Padma Vibhushan awardee SM Krishna Mandya
Published on

ಮಂಡ್ಯ: ಎಸ್.ಎಂ.ಕೃಷ್ಣ ಅವರು ರಾಜ್ಯ ಕಂಡ ಉತ್ತಮ ರಾಜಕೀಯ ಮುತ್ಸದಿ, ಮುಖ್ಯಮಂತ್ರಿಗಳಾಗಿ ಅತ್ಯಂತ ಶಿಸ್ತು ಮತ್ತು ಪ್ರಬುದ್ಧತೆಯಿಂದ ಸೇವೆ ಮಾಡಿದವರು ಎಂದು ಎಸ್.ಬಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ಬಣ್ಣಿಸಿದರು.

ನಗರದ ಮಾಂಡವ್ಯ ಎಕ್ಸ್‌ಲೆನ್ಸ್ ಪಿಯು ಕಾಲೇಜು ಆವರಣದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಎಸ್.ಎಂ.ಕೃಷ್ಣ ಅವರಿಗೆ ಸಂತಾಪ ಸೂಚಿಸಿ ಮಾತನಾಡಿದ ಅವರು, ರಾಜ್ಯ ಮಾತ್ರವಲ್ಲದೇ ರಾಷ್ಟ್ರ ರಾಜಕಾರಣದಲ್ಲಿಯೂ ಛಾಪು ಮೂಡಿಸಿದವರು. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಜತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದೇನೆ. ಅವರು ಅಧಿಕಾರಿಗಳನ್ನು ಗೌರವ ಕೊಟ್ಟು ಮಾತನಾಡಿಸುತ್ತಿದ್ದರು. ಮುಖ್ಯಮಂತ್ರಿಯಾಗಿದ್ದರೂ ಎಂದಿಗೂ ದರ್ಪ ತೋರಿಸಲಿಲ್ಲ ಎಂದರು.

ಎಸ್.ಎಂ.ಕೃಷ್ಣ ತಂದೆ ಎಸ್.ಸಿ.ಮಲ್ಲಯ್ಯ ಅವರು ಮಹಾರಾಜರ ಕಾಲದಲ್ಲಿ ಮೈಸೂರಿನಿಂದ ಮಂಡ್ಯವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸಲು ಶ್ರಮ ಪಟ್ಟಿ ಕೆಲಸ ಮಾಡಿದವರು. ಎಸ್.ಎಂ.ಕೃಷ್ಣ ಅವರು ಐಟಿ ವಲಯದಲ್ಲಿ ಬೆಂಗಳೂರು ನಗರವನ್ನು ವಿಶ್ವ ಮಟ್ಟದಲ್ಲಿ ಪರಿಚಯಿಸಿದರು. ಇದರಿಂದ ಲಕ್ಷಾಂತರ ಯುವಕರು ಉದ್ಯೋಗ ಪಡೆದು ಬದುಕು ಕಟ್ಟಿಕೊಂಡಿದ್ದಾರೆ. ಇದೆಲ್ಲವು ಅವರ ದೂರದೃಷ್ಟಿ ರಾಜಕೀಯ ನಡೆಯಿಂದ ಸಾಧ್ಯವಾಗಿದೆ ಎಂದು ಹೇಳಿದರು.

ಎಸ್‌ಬಿಇಟಿ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಎಸ್‌ಎಂಕೆ ಬಹಳ ಶಿಸ್ತಿನಿಂದ ಕೂಡಿದ ಮಹೋನ್ನತ ವ್ಯಕ್ತಿ. ಅವರ ವ್ಯಕ್ತಿತ್ವವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದರು.

ಕಾಲೇಜಿನ ಶೈಕ್ಷಣಿಕ ಪಾಲುದಾರರಾದ ಕೆ.ಚೇತನಕೃಷ್ಣ, ಎಂ.ಆರ್.ಮಂಜು, ಎಚ್.ಎಂ.ಶ್ರೀನಿವಾಸ್, ಪ್ರಾಂಶುಪಾಲೆ ಎಚ್.ಸರೋಜಾ, ಉಪನ್ಯಾಸಕ ದಿವಾಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net