

ಮೈಸೂರು: ಮೈಸೂರು ವಿಶ್ವವಿದ್ಯಾಲಯವು ಪಠ್ಯದ ಜತೆಗೆ ವಿವಿಧ ಕ್ರೀಡೆಗಳಿಗೂ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿದೆ ಎಂದು ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಹೇಳಿದರು.
ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗವು ಸ್ಪೋರ್ಟ್ಸ್ ಪೆವಿಲಿಯನ್‌ನ ಯೋಗ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ 2022-23ನೇ ಸಾಲಿನ ಮೈಸೂರು ವಿವಿ ಸಂಯೋಜಿತ ಹಾಗೂ ಘಟಕ ಕಾಲೇಜುಗಳ ಪ್ರತಿನಿಧಿಗಳ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು ಮುಖ್ಯ. ಪಠ್ಯದಿಂದ ಅಪಾರ ಜ್ಞಾನ ಪಡೆಯಬಹುದು. ಅದೇ ರೀತಿ ಕ್ರೀಡೆಯಿಂದ ದೈಹಿಕ, ಮಾನಸಿಕ ಸದೃಢ ಸಾಧ್ಯ. ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಕ್ರೀಡೆ ಪರಿಣಾಮಕಾರಿ ಸಾಧನವಾಗಿದೆ. ವಿದ್ಯಾರ್ಥಿಗಳು ಓದಿನ ಜತೆಗೆ ಕ್ರೀಡೆಯಲ್ಲೂ ಭಾಗಿಯಾಬೇಕು ಎಂದರು.
ಮೈಸೂರು ವಿವಿಯು ಹಿಂದಿನಿಂದಲೂ ಕ್ರೀಡೆ ಹಾಗೂ ಕ್ರೀಡಾಪಟುಗಳಿಗೆ ಅಪಾರ ಪ್ರೋತ್ಸಾಹ ನೀಡುತ್ತಿದೆ. ನನ್ನ ನಾಲ್ಕು ವರ್ಷದ ಅವಧಿಯಲ್ಲೂ ಕ್ರೀಡೆಗೆ ಎಲ್ಲ ರೀತಿಯ ಸಹಕಾರ ನೀಡಿದ್ದೇನೆ. ದೈಹಿಕ ಶಿಕ್ಷಣ ವಿಭಾಗದ ಬಹುತೇಕ ಎಲ್ಲ ಕೋರಿಗಳನ್ನು ಈಡೇರಿಸಿದ್ದೇನೆ. ವಲಯ ಮಟ್ಟ, ಅಂತರ ಕಾಲೇಜು, ಅಂತರ ವಿವಿ ಕ್ರೀಡಾಕೂಟಗಳಲ್ಲಿ ನಮ್ಮ ಕ್ರೀಡಾಪಟುಗಳು ಭಾಗಿಯಾಗಲು ಹಾಗೂ ನಮ್ಮ ಕ್ರೀಡಾಪಟುಗಳು ಅಭ್ಯಾಸ ಮಾಡಲು ಎಲ್ಲ ರೀತಿಯ ಸೌವಲತ್ತು ನೀಡಲಾಗಿದೆ. ಅಂತರ ವಿವಿ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕ್ರೀಡಾಪಟುಗಳನ್ನು ಪರಿಸ್ಕರಿಸಲಾಗಿದೆ ಎಂದರು.
ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಮಾತನಾಡಿ, ಪ್ರೊ.ಜಿ.ಹೇಮಂತಕುಮಾರ್ ಅವರು ಕುಲಪತಿಯಾದ ಬಳಿಕ ಕ್ರೀಡೆಗೆ ಅಪಾರ ಪ್ರೋತ್ಸಾಹ ನೀಡಿದ್ದಾರೆ. ವಿವಿಧ ಕ್ರೀಡಾಕೂಟಗಳ ಆಯೋಜನೆ ಸಂಬಂಧ ನಮ್ಮ ವಿಭಾಗ ಕೋರಿದ ಎಲ್ಲ ಬೇಡಿಕೆಗಳನ್ನು ಈಡೇರಿಸಿದ್ದಾರೆ ಎಂದು ಸ್ಮರಿಸಿದರು.
ಇದೇ ವೇಳೆ ಪ್ರೊ.ಜಿ.ಹೇಮಂತಕುಮಾರ್ ಅವರನ್ನು ಸನ್ಮಾನಿಸಲಾಯಿತು. ಕುಲಸಚಿವ ಪ್ರೊ.ಆರ್.ಶಿವಪ್ಪ, ಹಣಕಾಸು ಅಧಿಕಾರಿ ಡಾ.ಸಂಗೀತ ಗಜಾನನ ಭಟ್, ಡಾ.ಸಿ.ಕೃಷ್ಣ, ಸಿಂಡಿಕೇಟ್ ಸದಸ್ಯರಾದ ಡಾ.ಇ.ಸಿ.ನಿಂಗರಾಜ ಗೌಡ, ಎಂ.ಬಿ.ಗಪ್ಪಣ್ಣ, ವೈ.ಕೆ.ಪವಿತ್ರ ಇತರರಿದ್ದರು.
ಇದೇ ವೇಳೆ 2022-23ನೇ ಸಾಲಿನ ಕ್ರೀಡಾ ಚಟುವಟಿಕೆಗಳ ಆಯ್ಕೆ ಪ್ರಕ್ರಿಯೆ, ಸ್ಪರ್ಧೆ, ತರಬೇತಿ ಇತ್ಯಾದಿಗಳ ಬಗ್ಗೆ ಚರ್ಚಿಸಲಾಯಿತು. ಈ ಸಾಲಿನ ಮೈಸೂರು ವಿವಿ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಕ್ರಾಸ್ ಕಂಟ್ರಿ ಓಟ ಸ್ಪರ್ಧೆಯನ್ನು ಹುಣಸೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಹಿಳೆಯರ ಎಲ್ಲ ಗುಂಪು ಸ್ಪರ್ಧೆಗಳನ್ನು ಸಂಘಟಿಸಲು ಹಾಸನದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಒಪ್ಪಿಗೆ ಪಡೆದವು.