

ಮಡಿಕೇರಿ: ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿಯಲ್ಲಿರುವ ಸಾರ್ವಜನಿಕ ಬಸ್ ತಂಗುದಾಣದಲ್ಲಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು.
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಉಗ್ರರು ನಡೆಸಿದ್ದ ಭೀಕರ ದಾಳಿಗೆ ಸಂಭವಿಸಿ ಫೆ.೧೪ಕ್ಕೆ ಆರು ವರ್ಷವಾಗಿದೆ. ದಾಳಿಯಲ್ಲಿ ೪೦ ಯೋಧರು ಹುತಾತ್ಮರಾಗಿದ್ದರು. ಈ ಹಿನ್ನೆಲೆ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ, ಸಮಾಜಸೇವಕ ಚಂದನ್ ನಂದರಬೆಟ್ಟು ಸೈನಿಕರನ್ನು ಸ್ಮರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಹುತಾತ್ಮರಾದ ಸೈನಿಕರಿಗೆ ಗೌರವ ವಂದನೆ ಸಲ್ಲಿಸಿ ಮಾತನಾಡಿ, ಸೈನಿಕರು ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ದೇಶರಕ್ಷಣೆ ಮಾಡುತ್ತಾರೆ. ಅವರನ್ನು ಎಲ್ಲರೂ ಗೌರವಿಸಬೇಕು. ಸೈನಿಕರನ್ನು ಗೌರವಿಸುವುದು ಬಹಳ ಉತ್ತಮ ಕಾರ್ಯ. ಚಿಕ್ಕ ವಯಸ್ಸಿನಲ್ಲೇ ಶ್ರೀಶಾ ಅವರು ಬಹಳ ಒಳ್ಳೆಯ ಕಾರ್ಯವನ್ನು ಮಾಡುತ್ತಿದ್ದಾರೆ. ಇತರ ಜನರಿಗೆ ಇವರ ಕೆಲಸ ಕಾರ್ಯಗಳು ಸ್ಪೂರ್ತಿ ಎಂದರು.
ವಿದ್ಯಾರ್ಥಿನಿ ಶ್ರೀಶಾ ಮಾತನಾಡಿ, ೨೦೧೯ರಲ್ಲಿ ನಡೆದ ಭೀಕರ ದಾಳಿಯಲ್ಲಿ ಧೈರ್ಯಶಾಲಿ ಯೋಧರನ್ನು ಕಳೆದುಕೊಂಡಿದ್ದೇವೆ. ಯೋಧರ ತ್ಯಾಗ ಬಲಿದಾನವನ್ನು ದೇಶ ಎಂದಿಗೂ ಮರೆಯುವುದಿಲ್ಲ. ಪುಲ್ವಾಮ ದಾಳಿ, ದಾಳಿಯ ಹಿನ್ನಲೆ ಹಾಗೂ ಭಾರತೀಯ ಸೇನೆಯ ಹುತಾತ್ಮ ಸೈನಿಕರ ಬಗ್ಗೆ ಶ್ರೀಶಾ ಸವಿಸ್ತಾರವಾಗಿ ಮಾಹಿತಿ ಹಂಚಿದರು.
ಕಾರ್ಯಕ್ರಮದಲ್ಲಿ ಶ್ರೀಶಾ ಅವರ ಪೋಷಕರು, ಪತ್ರಕರ್ತ ಇಸ್ಮಾಯಿಲ್ ಕಂಡಕೆರೆ, ಭುವನ್ ಹುಲಿಮನೆ, ಸವಾದ್ ಉಸ್ಮಾನ್, ಮತ್ತಿತರರು ಹಾಜರಿದ್ದರು.