ಸರ್ಕಾರಿ ಇಲಾಖೆಗಳಲ್ಲಿ ಕೆಟಿಪಿಪಿ ಕಾಯ್ದೆಗೆ ತಿಲಾಂಜಲಿ:ಹಳೆಯ ಬಿಲ್​ ಬದಲು ಹೊಸ ಬಿಲ್​ಗಳಿಗೆ ಹಣ ಪಾವತಿ

vidhana
Published on

ಬೆಂಗಳೂರು: ಸರ್ಕಾರದ 35 ಇಲಾಖೆಗಳಲ್ಲಿ ಹಾಗೂ ಸರ್ಕಾರದ ಅಧೀನದ ನಿಗಮ, ಮಂಡಳಿ ಸೇರಿ ವಿವಿಧ ಸಂಸ್ಥೆಗಳಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ ಪಾಲನೆಯಾಗುತ್ತಿಲ್ಲ.

ಅಧಿಕಾರಿಗಳು ತಮಗಿಷ್ಟ ಕಂಪನಿಗಳಿಗೆ ಟೆಂಡರ್​ ನೀಡುವ ಸಲುವಾಗಿ ನಿಯಮಬಾಹಿರವಾಗಿ ಕ್ಲೋಸಿಂಗ್​ ಟೆಂಡರ್​ ನಡೆಸುತ್ತಿರುವ ಬಗ್ಗೆ ಗಂಭೀರ ಆರೋಪಗಳಿವೆ. ಟೆಂಡರ್​ ಪ್ರಕ್ರಿಯೆ ಸೇರಿ ಕಾಮಗಾರಿಗಳ ಬಿಲ್​ಗಳ ಪಾವತಿ ವಿಚಾರದಲ್ಲಿಯೂ ಅಧಿಕಾರಿಗಳು, ತಮ್ಮದೇ ಸೂತ್ರ ಅಳವಡಿಸಿಕೊಂಡಿರುವ ಬಗ್ಗೆ ದೂರುಗಳಿವೆ. ಕೆಟಿಪಿಪಿ ಕಾಯ್ದೆಯನ್ನು 1999ರಲ್ಲಿ ರೂಪಿಸಲಾಗಿತ್ತು. 2000ರ ಅಕ್ಟೋಬರ್​ನಲ್ಲಿ ಅಧಿಕೃತವಾಗಿ ಇದನ್ನು ಜಾರಿಗೆ ತರಲಾಯಿತು. ಲೋಕೋಪಯೋಗಿ, ಜಲ ಸಂಪನ್ಮೂಲ, ಇಂಧನ, ಕೃಷಿ, ವೈದ್ಯಕೀಯ, ಸಣ್ಣ ನೀರಾವರಿ, ಆರೋಗ್ಯ, ವಸತಿ ಸೇರಿ ಸರ್ಕಾರದ ಬಹುತೇಕ ಇಲಾಖೆಗಳಲ್ಲಿ ಹಾಗೂ ಇಲಾಖೆಗಳ ಅಧೀನದ ಮಂಡಳಿ, ನಿಗಮ, ಸಾರ್ವಜನಿಕ ವಲಯದ ಉದ್ಯಮ, ವಿಶ್ವವಿದ್ಯಾಲಯದ, ಸಹಕಾರ ಸಂಸ್ಥೆಗಳಲ್ಲಿ ಕೆಟಿಪಿಪಿ ನಿಯಮ ಪಾಲನೆ ಕಡ್ಡಾಯ.

ಉಕ್ಕಿನ ನಿರ್ಮಾಣ, ಕಟ್ಟಡ, ರಸ್ತೆಗಳು, ಸೇತುವೆ, ಬ್ರಿಡ್ಜ್​ ಸೇರಿ ವಿವಿಧ ಬಗೆಯ ನಿರ್ಮಾಣ ಹಂತದ ಕಾಮಗಾರಿಗಳು, ಯಂತ್ರೋಪಕರಣಗಳು, ಸಲಕರಣೆಗಳು, ಪೀಠೋಪಕರಣಗಳು, ಲೇಖನ ಸಾಮಗ್ರಿಗಳು, ಜವಳಿ ಕಚ್ಚಾ ಸಾಮಗ್ರಿಗಳು, ಔಷಧ, ರಾಸಾಯನಿಕಗಳು ಹಾಗೂ ಆಹಾರ ಧಾನ್ಯಗಳ ಖರೀದಿಗೆ ಇಲಾಖೆಗಳು ಕೆಟಿಪಿಪಿ ಪ್ರಕಾರ ಟೆಂಡರ್​ ನಡೆಸಿ ಫೈನಾನ್ಸಿಯಲ್​ ಬಿಡ್​ನಲ್ಲಿ ಕಡಿಮೆ ಬಿಡ್​ ಮಾಡಿ ಎಲ್​-1 ಪಡೆದ ಕಂಪನಿಗೆ ಕಾರ್ಯಾದೇಶ ಪತ್ರ ನೀಡಲಾಗುತ್ತದೆ. ಅಲ್ಲದೆ, ಟೆಂಡರ್​ ದಸ್ತಾವೇಜು ಪರಿಶೀಲನೆಗೆ,ಮೌಲ್ಯಮಾಪನ ಮತ್ತು ಅಂಗೀಕರಿಸಲು ಟೆಂಡರ್​ ಪರಿಶೀಲನಾ ಸಮಿತಿ ರಚಿಸಲಾಗುತ್ತದೆ. ಈ ಸಮಿತಿಯು ಟೆಂಡರ್​ ಪ್ರಕ್ರಿಯೆ ಬಗ್ಗೆ ಮೇಲ್ವಿಚಾರಣೆ ನಡೆಸುತ್ತದೆ. 2 ಕೋಟಿ ರೂ.ವರೆಗಿನ ಮೌಲ್ಯದ ಟೆಂಡರ್​ಗೆ 30 ದಿನ, 2 ಕೋಟಿ ರೂ.ಗಿಂತ ಅಧಿಕ ಮೌಲ್ಯದ ಟೆಂಡರ್​ಗಳಿಗೆ 60 ದಿನ ಕಾಲಾವಕಾಶ ನೀಡಲಾಗುತ್ತದೆ. ಆದರೆ, ಬಹುತೇಕ ಇಲಾಖೆಗಳಲ್ಲಿ ಹಾಗೂ ವಿವಿಧ ನಿಗಮ ಮಂಡಳಿಗಳಲ್ಲಿ ಅಧಿಕಾರಿಗಳು ಕೆಟಿಪಿಪಿ ಬದಲು ಇ& ಪೋರ್ಟಲ್​ನಲ್ಲಿ ಟೆಂಡರ್​ ನಡೆಸುವ ಬದಲು ಕ್ಲೋಸಿಂಗ್​, ಕೋಟೇಷನ್​ ಮೂಲಕ ಟೆಂಡರ್​ ನಡೆಸಲಾಗುತ್ತದೆ.

ಬಿಲ್​ ಪಾವತಿಗೆ ಸಿಂಡಿಕೇಟ್​ ರಚನೆ

ಸರ್ಕಾರದ ಬಹುತೇಕ ಇಲಾಖೆಗಳಲ್ಲಿ ಹೊಸ ಬಿಲ್​ಗಳಿಗೆ ಹಣ ಪಾವತಿಸಲು ಕೆಲ ಬಲಾಢ್ಯರು ಸಿಂಡಿಕೇಟ್​ ರಚಿಸಿಕೊಂಡಿದ್ದಾರೆ. ಸಚಿವರ ಹೆಸರು ಹೇಳಿಕೊಂಡು ಟೆಂಡರ್​ ಪಡೆಯುವುದು, ಹೊಸ ಬಿಲ್​ಗಳಿಗೆ ಹಣ ಬಿಡುಗಡೆ ಮಾಡಿಕೊಳ್ಳುತ್ತಿರುವ ದಂಧೆ ಎಲ್ಲ ಇಲಾಖೆಗಳಲ್ಲೂ ನಡೆಯುತ್ತಿದೆ. ಕೆಟಿಪಿಪಿ ನಿಯಮದಂತೆ ಬಾಕಿ ಉಳಿದಿರುವ ಕಾಮಗಾರಿಗಳ ಬಿಲ್​ಗಳಿಗೆ ಹಣ ಬಿಡುಗಡೆ ಮಾಡಬೇಕು. ಆದರೆ, ನಿಯಮ ಉಲ್ಲಂಘಿಸಿ ಅಧಿಕಾರಿಗಳು, ಹಳೆಯ ಬಿಲ್​ಗಳ ಬದಲು ಹೊಸ ಬಿಲ್​ಗಳಿಗೆ ಹಣ ಬಿಡುಗಡೆ ಮಾಡುತ್ತಿದ್ದಾರೆ. ಇದರಿಂದಾಗಿ ಸಣ್ಣ, ಮಧ್ಯಮ ಗುತ್ತಿಗೆದಾರರು ಕಂಗಾಲಾಗಿದ್ದಾರೆ.

ಭ್ರಷ್ಟಾಚಾರಕ್ಕೆ ರಹದಾರಿ:

ಕೆಟಿಪಿಪಿ ಬದಲು ಕ್ಲೋಸಿಂಗ್​ ಟೆಂಡರ್​ ನಡೆಸಿದರೆ ಪಾರದರ್ಶಕತೆ ಇರುವುದಿಲ್ಲ. ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಳ್ಳಲಾಗುತ್ತದೆ. ಕಂಪನಿಗಳು ನಕಲಿ ಪ್ರಮಾಣಪತ್ರ ಸಲ್ಲಿಸಿ ನಿಗದಿಗಿಂತ ಅಧಿಕ ಮೊತ್ತ ನಮೂದಿಸಿ ಟೆಂಡರ್​ ಪಡೆಯುತ್ತೇವೆ. ಯಾವ ಕಂಪನಿಗಳು ಏನೇನು ದಾಖಲೆಗಳನ್ನು ಸಲ್ಲಿಸಿರುವ ಬಗ್ಗೆ ಗೊತ್ತಾಗುವುದಿಲ್ಲ. ನಿಗದಿತ ಪ್ರಮಾಣಗಿಂತ ಹೆಚ್ಚು ಮೊತ್ತ ನಮೂದಿಸಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ನಷ್ಟ ಉಂಟು ಮಾಡುತ್ತಾರೆ. ಅಲ್ಲದೆ, ತುರ್ತು ಪರಿಸ್ಥಿತಿಯಲ್ಲಿ ಅತಿ ಅವಶ್ಯಕತೆ ಇದ್ದಾಗ, ಸತತವಾಗಿ ಟೆಂಡರ್​ ವಿಳಂಬವಾದರೆ ಮಾತ್ರವೇ ಕೋಟೇಷನ್​ ಮೂಲಕ 1 ಲಕ್ಷ ರೂ. ಒಳಗಿನ ಟೆಂಡರ್​ ಖರೀದಿಸಲು ಅವಕಾಶ ಇದೆ. ಟೆಂಡರ್​ ಮೌಲ್ಯ ಒಂದು ಲಕ್ಷ ರೂ. ದಾಟಿದರೆ ಕೆಟಿಪಿಪಿ ಕಾಯ್ದೆಯಂತೆ ಆನ್​ಲೈನ್​ನಲ್ಲಿ ಟೆಂಡರ್​ ನಡೆಸಿ ಅತಿ ಕಡಿಮೆ ಮೊತ್ತಕ್ಕೆ ಬಿಡ್​ ಸಲ್ಲಿಸಿದವರಿಗೆ ಕಾರ್ಯಾದೇಶ ಪತ್ರ ನೀಡಬೇಕು. ಆದರೆ, ಅಧಿಕಾರಿಗಳು ಕಮಿಷನ್​ ಪಡೆದು ರ್ನಿದಿಷ್ಟ ಕಂಪನಿಗೆ ಅನುಕೂಲ ಮಾಡಿಕೊಳ್ಳಲು ಟೆಂಡರ್​ ಷರತ್ತುಗಳನ್ನೇ ಬದಲಾಯಿಸುತ್ತಿದ್ದಾರೆ.

ಕೆಟಿಪಿಪಿನಿಂದ ಅನುಕೂಲವೇನು?

* ಓಪನ್​ ಟೆಂಡರ್​ ಇರಲಿದೆ

* ಪಾರದರ್ಶಕತೆಗೆ ಅವಕಾಶ

* ಎಷ್ಟು ಕಂಪನಿಗಳು ಬಿಡ್​ ಸಲ್ಲಿಕೆ ಬಗ್ಗೆ ಗೊತ್ತಾಗುತ್ತದೆ

* ದಾಖಲೆಗಳು, ಎಷ್ಟು ಮೊತ್ತ ನಮೂದಿಸಿವೆ ಬಗ್ಗೆ ತಿಳಿಯಲಿದೆ

* ನಕಲಿ ದಾಖಲೆ ಸಲ್ಲಿಸಿದರೆ ಪತ್ತೆ

* ಆರೋಗ್ಯಕರ ಸ್ಪರ್ಧೆ ಇರಲಿದೆ

* ನಿಗದಿಗಿಂತ ಹೆಚ್ಚು ಮೊತ್ತ ನಮೂದಿಸಲು ಆಗಲ್ಲ

* ಸಾಮರ್ಥ್ಯ ಆಧಾರದಲ್ಲಿ ಕಡಿಮೆ ಬಿಡ್​ ಮಾಡಿದವರಿಗೆ ಟೆಂಡರ್​

ಸರ್ಕಾರದ ಯಾವ ಇಲಾಖೆಗಳಲ್ಲೂ ಕೆಟಿಪಿಪಿ ಪಾಲನೆಯಾಗುತ್ತಿಲ್ಲ. ಅಧಿಕಾರಿಗಳು ಅವರವರ ಅನುಕೂಲಕ್ಕೆ ತಕ್ಕಂತೆ ಹಣ ಬಿಡುಗಡೆ ಮಾಡುತ್ತಿದ್ದಾರೆ. ಅವರದ್ದೇ ಫಾಮುರ್ಲಾ ಉಪಯೋಗಿಸಿ ಸ್ಪೆಷಲ್​ ಎಲ್​ಒಸಿ ರೂಪದಲ್ಲಿ ಹಣ ದುರುಪಯೋಗ ಮಾಡುತ್ತಿದ್ದಾರೆ. ಹಳೆಯ ಬಿಲ್​ಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ.

| ಆರ್​.ಮಂಜುನಾಥ್​, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net