ಹಾಕಿ ದಿಗ್ಗಜರಿಗೆ ಗೌರವಾರ್ಪಣೆ

marcara
Published on

ಮಡಿಕೇರಿ: ಹಾಕಿ ಇಂಡಿಯಾ ಸಂಸ್ಥೆಗೆ ೧೦೦ ವರ್ಷಗಳು ತುಂಬಿದ ಹಿನ್ನಲೆಯಲ್ಲಿ ಮರ್ಕೇರಾ ಡೌನ್ಸ್ ಗಾಲ್ಫ್ ಕ್ಲಬ್‌ನಿಂದ ಭಾರತೀಯ ಹಾಕಿ ರಂಗದ ದಿಗ್ಗಜ ಆಟಗಾರರನ್ನು ಗಾಲ್ಫ್ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಮರ್ಕೇರಾ ಡೌನ್ಸ್ ಗಾಲ್ಫ್ ಕ್ಲಬ್ ಮತ್ತು ಮದ್ರಾಸ್ ಕ್ರಿಕೆಟ್ ಕ್ಲಬ್‌ಗಳ ಸಂಯುಕ್ತಾಶ್ರಯದಲ್ಲಿ ಮರ್ಕೇರಾ ಡೌನ್ಸ್ ಗಾಲ್ಫ್ ಕ್ಲಬ್ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಹಾಕಿ ಕ್ರೀಡೆಗೆ ಶತಮಾನೋತ್ಸವದ ಸಂಭ್ರಮವನ್ನು ಹಾಕಿದಿಗ್ಗಜರಿಗೆ ಸನ್ಮಾನದ ಗೌರವಾರ್ಪಣೆ ಮೂಲಕ ಆಚರಿಸಲಾಯಿತು.

ಮಾಳೆಯಂಡ ಮುತ್ತಪ್ಪ, ಅಂಜಪರವಂಡ ಡಾ.ಬಿ.ಸುಬ್ಬಯ್ಯ, ಮುಕ್ಕಾಟೀರ ತಿಮ್ಮಯ್ಯ ಅಪ್ಪಯ್ಯ, ಬಾಳೆಯಡ ಪೂಣಚ್ಚ, ಬುಟ್ಟಿಯಂಡ ಚಂಗಪ್ಪ, ಮುಕ್ಕಾಟೀರ ವಿನೋದ್ ಚಿಣ್ಣಪ್ಪ, ಕೂತಂಡ ಪೂಣಚ್ಚ, ಪೈಕೇರ ಕಾಳಯ್ಯ, ಮನೆಯಪಂಡ ಸೋಮಯ್ಯ, ಸಿ.ಎಸ್.ಪೂಣಚ್ಚ, ಲೆಫ್ಟಿನೆಂಟ್ ಕರ್ನಲ್ ಬಾಳೆಯಡ ಕೆ.ಸುಬ್ರಹ್ಮಣಿ, ಬಿ.ಪಿ.ಗೋವಿಂದ, ಮೊಹಮ್ಮದ್ ರಿಯಾಜ್ ಮತ್ತು ಪದ್ಮಶ್ರೀ ವಾಸುದೇವನ್ ಭಾಸ್ಕರನ್ ಅವರನ್ನು ಮರ್ಕೇರಾ ಡೌನ್ಸ್ ಗಾಲ್ಫ್ ಕ್ಲಬ್ ಅಧ್ಯಕ್ಷ ಐಚೇಟ್ಟೀರ ಅನಿಲ್, ಗೌರವ ಕಾರ್ಯದರ್ಶಿ ಕೊಂಗೆಟೀರ ಹರೀಶ್ ಅಪ್ಪಣ್ಣ, ಮದ್ರಾಸ್ ಕ್ರಿಕೆಟ್ ಕ್ಲಬ್ ನ ಗೌರವ ಕಾರ್ಯದರ್ಶಿ ನಿರಂಜನ್ ಮುದಲಿಯಾರ್, ಕ್ರಿಕೆಟ್ ಕ್ಲಬ್‌ನ ಹಾಕಿ ಕ್ರೀಡಾ ಸಮಿತಿ ಅಧ್ಯಕ್ಷ ರಾಜೀವ್ ರೆಡ್ಡಿ ಹಾಜರಿದ್ದರು.

ಈ ಸಂದರ್ಭ ಮಾತನಾಡಿದ ಐಚೆಟ್ಟೀರ ಅನಿಲ್, ಮದ್ರಾಸ್ ಕ್ರಿಕೆಟ್ ಕ್ಲಬ್ ಕೂಡ ಶತಮಾನೋತ್ಸವ ಪೂರೈಸುತ್ತಿದೆ. ಇದೇ ಸಂದರ್ಭ ಭಾರತೀಯ ಹಾಕಿಗೆ ಕೂಡ ಶತಮಾನ ಭರ್ತಿಯಾಗುತ್ತಿರುವುದು ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆ ತರುವಂಥದ್ದು. ಮರ್ಕೇರಾ ಡೌನ್ಸ್ ಗಾಲ್ಫ್ ಕ್ಲಬ್ ವತಿಯಿಂದ ದೇಶದ ಹಾಕಿ ರಂಗದ ದಿಗ್ಗಜರನ್ನು ಸನ್ಮಾನಿಸುವ ಮೂಲಕ ಹಾಕಿ ಕ್ರೀಡೆಗೆ ಗಾಲ್ಫ್ ಕ್ಪೀಡಾಳುಗಳು ತಮ್ಮ ಗೌರವ ಸಲ್ಲಿಸುತ್ತಿದ್ದಾರೆ. ಸನ್ಮಾನಕ್ಕೆ ಪಾತ್ರರಾದ ಹಾಕಿ ದಿಗ್ಗಜರು ಯುವಕ್ರೀಡಾಪಟುಗಳಿಗೆ ಮಾದರಿಯಾಗಿದ್ದಾರೆ. ಇವರ ಪ್ರೋತ್ಸಾಹ ಭಾರತದ ಹಾಕಿ ಕ್ರೀಡಾರಂಗದಲ್ಲಿ ನವಚೈತನ್ಯಕ್ಕೆ ಕಾರಣವಾಗಬೇಕಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.

ಲೆಫ್ಟಿನೆಂಟ್ ಕರ್ನಲ್ ಬಾಳೆಯಡ ಕೆ.ಸುಬ್ರಹ್ಮಣಿ, ಭಾರತ ಹಾಕಿಗೆ ಚಿನ್ನದ ಪದಕ ದೊರಕದೇ ೫೦ ವರ್ಷಗಳೇ ಆಗಿವೆ. ಯುವಕ್ರೀಡಾಪಟುಗಳು ಮತ್ತಷ್ಟು ಚೈತನ್ಯದೊಂದಿಗೆ ಭಾರತಕ್ಕೆ ಸ್ವರ್ಣ ಪದಕ ದೊರಕಿಸುವ ನಿಟ್ಟಿನಲ್ಲಿ ಕಾರ್ಯಪ್ರವತ್ತರಾಗಬೇಕೆಂದರು.

ಮರ್ಕೇರಾ ಡೌನ್ಸ್ ಗಾಲ್ಫ್ ಕ್ಲಬ್ ಮತ್ತು ಮದ್ರಾಸ್ ಕ್ರಿಕೆಟ್ ಕ್ಲಬ್ ತಂಡಗಳ ನಡುವೇ ಮಡಿಕೇರಿಯ ಸಾಯಿ ಕ್ರೀಡಾನಿಲಯದ ಕತಕ ಹುಲ್ಲು ಹಾಸಿನ ಮೈದಾನದಲ್ಲಿ ಪ್ರದರ್ಶನ ಹಾಕಿ ಪಂದ್ಯಾಟ ನೆಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net