

ವಿಜಯಪುರ: ಹೃದಯಾಘಾತದಿಂದ ನಿಧನರಾದ ಮುಖ್ಯಮಂತ್ರಿ ಮಾಧ್ಯಮ ಸಂಯೋಜಕ ಹಾಗೂ ಕ್ರಿಯಾಶೀಲ ಪತ್ರಕರ್ತ ಗುರುಲಿಂಗಯ್ಯಸ್ವಾಮಿ ಹೊಳಿಮಠ ಅವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದ ಸಂಘದ ಹಳೇ ಕಚೇರಿಯಲ್ಲಿ ಸೋಮವಾರ ಮೃತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಆಚರಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಮಾತನಾಡಿ, ಪತ್ರಕರ್ತರು ಸದಾ ಒತ್ತಡದ ಮಧ್ಯದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಅದೇ ಒತ್ತಡದಲ್ಲಿ ಗುರಲಿಂಗ ಸ್ವಾಮಿ ಹೊಳಿಮಠ ಕಾರ್ಯನಿರ್ವಹಿಸಿದರೂ, ಸದಾ ನಗು-ಮುಖದಿಂದಲೇ ಇರುತ್ತಿದ್ದರು. ಅಂಥ ಕ್ರಿಯಾಶೀಲ ಹಾಗೂ ನಗುಮೊಗದ ಪತ್ರಕರ್ತನನ್ನು ಕಳೆದುಕೊಂಡ ಮಾಧ್ಯಮ ಕ್ಷೇತ್ರ ಬಡವಾಗಿದೆ ಎಂದರು.
ಹಿರಿಯ ಪತ್ರಕರ್ತ ಮಹೇಶ ಶೆಟಗಾರ ಮಾತನಾಡಿ, ಪತ್ರಕರ್ತರಿಗೆ ಸದಾ ಒತ್ತಡ ಇದ್ದಿದ್ದೇ. ಆದರೆ ಅಂಥ ಒತ್ತಡದಲ್ಲಿ ಪತ್ರಕರ್ತರು ತಮ್ಮ ಆರೋಗ್ಯದ ಕಡೆಗೆ ಗಮನ ಕೇಂದ್ರೀಕರಿಸಬೇಕೆಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಖಜಾಂಚಿ ರಾಹುಲ ಆಪ್ಟೆ, ಸಂಘದ ರಾಜ್ಯ ನಾಮನಿರ್ದೇಶಿತ ಸದಸ್ಯ ಕೆ.ಕೆ. ಕುಲಕರ್ಣಿ, ರಾಹುಲ ಮಾನಕರ, ವಿನಾಯಕ ಸೊಂಡೂರ, ನಿಂಬಣ್ಣ ಕಾಂಬಳೆ, ದೇವೇಂದ್ರ ಮೇತ್ರಿ, ಇಸ್ಮಾಯಿಲ್ ಮುಲ್ಲಾ, ತೌಫಿಕ್ ಕಲಾದಗಿ, ಇರ್ಫಾನ್ ಶೇಖ್ ಸೇರಿದಂತೆ ಅನೇಕ ಪತ್ರಕರ್ತರಿದ್ದರು.