

ಮೈಸೂರು: ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ವಿಧಾನಪರಿಷತ್ತಿನ ಮಾಜಿ ಸದಸ್ಯ ಡಿ.ಮಾದೇಗೌಡ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಕನ್ನಡ ಚಳವಳಿಗಾರರ ಸಂಘದಿಂದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಸೇವಾ ರತ್ನ ಪ್ರಶಸ್ತಿ ಪ್ರದಾನ ನೀಡಿ ಗೌರವಿಸಲಾಯಿತು.
ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಮಾತನಾಡಿ, ಡಿ. ಮಾದೇಗೌಡ ಅವರು ಸಾವಿರಾರು ಬಡ, ಮಧ್ಯಮ ಜನರಿಗೆ ನಿವೇಶನ ನೀಡುವ ಮೂಲಕ ಸದಾ ನೆನಪಿನಲ್ಲಿ ಉಳಿಯುವಂತಹರಾಗಿದ್ದಾರೆ. ಇಂದಿಗೂ ಹಲವರು ಇವರನ್ನು ಸದಾ ಸ್ಮರಿಸುತ್ತಿದ್ದಾರೆ ಎಂದರು.
ಈ ಹಿಂದೆ ಸಿಐಟಿಬಿ ಅಧ್ಯಕ್ಷರಾಗಿದ್ದ ವೇಳೆ ಮನೆ, ಮನೆ ಸಮೀಕ್ಷೆ ನಡೆಸಿ, ಮನೆ ಇಲ್ಲದವರು, ಬಡವರನ್ನು ಗುರುತಿಸಿ ನಿವೇಶನ ನೀಡಿದ್ದು ಮುಡಾದ ಇತಿಹಾಸದಲ್ಲೇ ಚರಿತ್ರಾರ್ಹವಾಗಿದೆ. ನಗರದ ಹೃದಯ ಭಾಗದಲ್ಲಿ ಭವ್ಯ ವಿವೇಕ ಸ್ಮಾರಕ ನಿರ್ಮಾಣಕ್ಕಾಗಿ ನಡೆದ ದೊಡ್ಡ ಹೋರಾಟದ ನೇತೃತ್ವ ವಹಿಸಿದ್ದರು ಎಂದು ನುಡಿದರು.
ಹಿರಿಯ ಸಮಾಜ ಸೇವಕ ರಘುರಾಮ ವಾಜಪೇಯಿ ಮಾತನಾಡಿ, ಈ ಹಿಂದೆ ವಸತಿ ಹೀನರಿಗೆ ನಿವೇಶನ ನೀಡಬೇಕೆಂದಾಗ ಕ್ರಮ ಕೈಗೊಂಡಿದ್ದು ಮಾತ್ರವಲ್ಲ, ಅರ್ಜಿಗಳನ್ನು ಹೇಗೆ ಭರ್ತಿ ಮಾಡಬೇಕೆಂಬ ಪುಸ್ತಕವನ್ನೂ ವಿತರಿಸಿ, ನಿವೇಶನ ಪಡೆದುಕೊಳ್ಳುವ ಕೆಲಸ ಸುಲಭವನ್ನಾಗಿಸಿದರು. ಈಗಲೂ ಅಂತಹ ಬಡಾವಣೆಗಳಿಗೆ ಹೋದಲ್ಲಿ ಮಾದೇಗೌಡರನ್ನು ನೆನೆಯುತ್ತಾರೆ ಎಂದರು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ, ಜಿಲ್ಲಾ ಕನ್ನಡ ಚಳವಳಿಗಾರರ ಸಂಘದ ಅಧ್ಯಕ್ಷ ಬಿ.ಎ. ಶಿವಶಂಕರ್, ಜಿಲ್ಲಾ ಕಸಪಾ ಮಾಜಿ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷೆ ಯಮುನಾ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಇತರರು ಇದ್ದರು.