

ಮೈಸೂರು: ಕರ್ನಾಟಕ ಜಾನಪದ ಅಕಾಡೆಮಿ, ಪ್ರಾದೇಶಿಕ ಜಾನಪದ ಅಧ್ಯಯನ ಮತ್ತು ಜನಪದ ಕಲೆಗಳ ಕಲಿಕಾ ಕೇಂದ್ರ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಹಾಗೂ ಏಕತಾರಿ ಸಾಂಸ್ಕೃತಿಕ ಸಂಘಟನೆಯಿಂದ ಜಾನಪದ ಸಾಧಕರನ್ನು ಸನ್ಮಾನಿಸಲಾಯಿತು.
ನಗರದ ಕಲಾಮಂದಿರ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಜನಪದ ನೃತ್ಯಗಳು ಮತ್ತು ಜನಪದ ಗೀತೆಗಳ ಕಲಿಕಾ ತರಬೇತಿ ಶಿಬಿರದದ ಸಮಾರೋಪದಲ್ಲಿ ಜಾನಪದ ಸಾಧಕರಿಗೆ ಜನಪದ ನೃತ್ಯ ಸಿರಿ ಪ್ರಶಸ್ತಿ-2024 ನೀಡಿ ಅಭಿನಂದಿಸಲಾಯಿತು.
ಜಾನಪದ ಸಾಧಕರಾದ ಡಾ.ನಿಂಗರಾಜು(ಕಂಸಾಳೆ), ಸಿ.ಸುಂದರೇಶ (ಪೂಜಾ ಕುಣಿತ), ಕೃಷ್ಣಮೂರ್ತಿ ತಲಕಾಡು(ಕಂಸಾಳೆ), ಕೃಷ್ಣಯ್ಯ(ವೀರಮಕ್ಕಳ ಕುಣಿತ), ಬಿಳಿಗಿರಿ(ಕಂಸಾಳೆ), ಎನ್. ನಿಖಿಲ್(ಡೊಳ್ಳು ಕುಣಿತ), ಸಂತೋಷ (ಕಂಸಾಳೆ), ಪಿ.ಪುನೀತ್‌ಕುಮಾರ (ಡೊಳ್ಳು ಕುಣಿತ), ಎಸ್. ರಮ್ಯಾ (ಡೊಳ್ಳು ಕುಣಿತ), ಸಿದ್ದರಾಜು ಎಂ.ಜಂಗಮ(ಡೊಳ್ಳು ಕುಣಿತ), ಶಿವು(ಕಂಸಾಳೆ) ಹಾಗೂ ಪ್ರಿಯಾಂಕಾ (ಕಂಸಾಳೆ) ಅವರಿಗೆ ರಂಗಾಯಣದ ಮಾಜಿ ನಿರ್ದೇಶಕ ಜನಾರ್ದನ (ಜನ್ನಿ) ಪ್ರಶಸ್ತಿ ಪ್ರದಾನ ಮಾಡಿದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ.ಉಮೇಶ್ ಮಾತನಾಡಿ, ಎಲ್ಲವನ್ನೂ ಜಾನಪದ ಎನ್ನುವ ಹಂತದಲ್ಲಿ ಇದ್ದೇವೆ. ಜಾನಪದ ಸಾಹಿತ್ಯ ಹಾಗೂ ದಿನ ನಿತ್ಯ ಕೇಳುವ ಪವಾಡ ಪುರುಷರ ಕತೆಗಳ ನಡುವೆ ಬಹಳಷ್ಟು ವ್ಯತ್ಯಾಸಗಳಿವೆ ಎಂದು ಹೇಳಿದರು.
ಶಿಬಿರಗಳು ಕೇವಲ ಬಿಡಿ ಗೀತೆಗಳನ್ನು ಕಲಿಸಲಷ್ಟೇ ಸಿಮೀತವಾಗಬಾರದು. ವೃತ್ತಿಗಾಯಕರನ್ನಾಗಿ ಮಾಡಬೇಕು. ಜೀವನ ಪ್ರೀತಿಯ ಪರಂಪರೆಯನ್ನು ಉಳಿಸಬೇಕಾದರೆ ವೃತ್ತಿಗಾಯಕರನ್ನಾಗಿಸುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳಾಗಬೇಕು. ಯುವಕರಿಗೆ ಜಾನಪದ ಕಾವ್ಯ ಪಠಣವಾಗಬೇಕು. ಮಕ್ಕಳನ್ನು ಉಳಿಸುವ ಶಕ್ತಿ ಜಾನಪದಕ್ಕಿದೆ ಎಂದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಹಾಗೂ ಸಿಂಡಿಕೇಟ್ ಸೇರಿದಂತೆ ವಿವಿಧ ವಿವಿಗಳಿಗೆ ನೇಮಕಗೊಂಡ ಗೊರವಾಲೆ ಚಂದ್ರಶೇಖರ, ಮೋಹನ್, ನಾಗರಾಜ್, ದಂಡಿಕೆರೆ ಹಾಗೂ ಬೀರಪ್ಪ ಅವರನ್ನು ಅಭಿನಂದಿಸಲಾಯಿತು. ರಂಗ ನಿರ್ದೇಶಕ ಮೈಮ್ ರಮೇಶ, ವಿವಿ ಕ್ರಿಯೇಷನ್ಸ್‌ನ ವಿಮಲಾ ವೀರೇಶ, ಶಿಬಿರದ ನಿರ್ದೇಶಕ ದೇವಾನಂದ ವರಪ್ರಸಾದ್ ಇತರರು ಇದ್ದರು. ಶಿಬಿರಾರ್ಥಿಗಳಿಂದ ಜನಪದ ನೃತ್ಯ ಪ್ರಕಾರಗಳು ಪ್ರಸ್ತುತಗೊಂಡವು.