

ಮಂಡ್ಯ: ಸಾಹಿತ್ಯ ಲೋಕದ ಕಾದಂಬರಿ ತಜ್ಞ ಡಾ.ಎಸ್.ಎಲ್.ಭೈರಪ್ಪ ಅವರ ಸಮಗ್ರ ಸಾಹಿತ್ಯಕ್ಕೆ ಜ್ಞಾನಪೀಠ ಪುರಸ್ಕಾರ ಮರಣೋತ್ತರದಲ್ಲಾದರೂ ಲಭಿಸಲಿ ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಅಭಿಪ್ರಾಯಪಟ್ಟರು.
ನಗರದ ಗಾಂಧಿಭವನದಲ್ಲಿ ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಮತ್ತು ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರಿಗೆ ಪುಷ್ಪ ನಮನ ಹಾಗೂ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡದ ಸಾರಸ್ವತ ಲೋಕದ ಜೀವಂತ ದಂತಕಥೆಯಾಗಿ ಉಳಿಯುವ ಭೈರಪ್ಪನವರು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆ ನೀಡಿ ತಮ್ಮದೇ ಚಾಪು ಮೂಡಿಸಿ. ದೇಶಾದ್ಯಂತ ಸಾಹಿತ್ಯಾಸಕ್ತರಿಗೆ ಚಿರಪರಿಚಿತರಾಗಿದ್ದರು. ಅವರಿಗೆ ಸರಸ್ವತಿ ಸವ್ಮಾನ್ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕಾರ ಸೇರಿದಂತೆ ಹಲವು ವಿವಿಗಳಿಂದ ಗೌರವ ಡಾಕ್ಟರೇಟ್ ಕೂಡ ಲಭಿಸಿವೆ ಎಂದು ನುಡಿದರು.
13 ವರ್ಷದವರಿದ್ದಾಗಲೇ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಕೊಂಡ ಭೈರಪ್ಪನವರು ಕಿತ್ತು ತಿನ್ನುವ ಬಡತನದ ನಡುವೆಯು ಪ್ರತಿಭಾವಂತರಾಗಿ ಬೆಳೆದರು. ಸತ್ಯ ಮತ್ತು ಸೌಂದರ್ಯ ಪ್ರಬಂಧಕ್ಕೆ ಡಾಕ್ಟರೇಟ್ ಗೌರವ ಲಭಿಸಿತು. ಅವರ ಬರವಣಿಗೆಯ ಶೈಲಿಯೇ ವಿಶೇಷ. ಸರಳ, ಸ್ಪಷ್ಟ ಮತ್ತು ಬದುಕಿನ ಸತ್ಯತೆಯನ್ನು ತೋರಿಸುವ ಚಿತ್ರಣವಾಗಿವೆ. 25ಕ್ಕೂ ಹೆಚ್ಚು ಕಾದಂಬರಿ, ಕಥೆ, ಪ್ರಬಂಧ ರಚಿಸಿದ್ದಾರೆ. ಮಾತ್ರವಲ್ಲದೆ ಅವರ ಕೃತಿಗಳು 14 ಭಾಷೆಗಳಿಗೆ ಅನುವಾದವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
20ಕ್ಕೂ ಹೆಚ್ಚು ಕಾದಂಬರಿಗಳು ಸಿನಿಮಾ ಮತ್ತು ಧಾರಾವಾಹಿಗಳಾಗಿ ಜನಮನ ಗೆದ್ದಿವೆ. ರಾಷ್ಟ್ರ ಪುರಸ್ಕಾರ ಪಡೆಯುವಲ್ಲಿ ಕೀರ್ತಿ ಸಂಪಾದಿಸಿವೆ. ಅವರ ಕಾದಂಬರಿಗಾಗಿ ಸಾಹಿತ್ಯಾಸಕ್ತರು ಓದಲು ಮತ್ತು ಖರೀದಿಸಲು ತುದಿಕಾಲಿನಲ್ಲಿ ನಿಲ್ಲುತ್ತಿದ್ದರು. ಅಂತಹ ಸಾಹಿತ್ಯ ದಿಗ್ಗಜರು ಬದುಕಿದ್ದಾಗಲೇ ಜ್ಞಾನಪೀಠ ಪುರಸ್ಕಾರ ನೀಡಬೇಕಿತ್ತು. ಇನ್ನಾದರೂ ಜ್ಞಾನಪೀಠ ಪುರಸ್ಕಾರ ನೀಡಿ ಮೌಲ್ಯ ಹೆಚ್ಚಿಸಿಕೊಳ್ಳಲಿ ಎಂದು ಒತ್ತಾಯಿಸಿದರು.
ಜಿಲ್ಲಾ ಕಸಾಪ ಕೋಶಾಧ್ಯಕ್ಷ ಧನಂಜಯ ದರಸಗುಪ್ಪೆ, ಪ್ರತಿಭಾಂಜಲಿ ಪ್ರೊ.ಡೇವಿಡ್, ಸಾಹಿತಿ ಲಿಂಗಣ್ಣ ಬಂದೂಕರ್, ಚಂದ್ರಶೇಖರ್, ಕೃಷ್ಣ, ಕೆಂಪೇಗೌಡ, ಶಂಕರರಾಯ್ ಇತರರಿದ್ದರು.