ಡಾ.ಜಯಲಕ್ಷ್ಮೀ ಅಂತಃಕರಣದ ಹೆಣ್ಣು ಮಗಳು: ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಹೇಳಿಕೆ

Tribute to Dr. Jayalakshmi Mandya
Published on

ಮಂಡ್ಯ: ಹಿರಿಯ ಜಾನಪದ ವಿದ್ವಾಂಸರಾದ ಡಾ.ಜಯಲಕ್ಷ್ಮೀ ಸೀತಾಪುರ ಅವರು ಅಂತಃಕರಣದ ಹೆಣ್ಣು ಮಗಳು ಎಂದು ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಹೇಳಿದರು.

ನಗರದ ಗಾಂಧಿಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಮತ್ತು ತಾಲೂಕು ಘಟಕ, ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಶಾಖೆ, ಜಾನಪದ ಜನ್ನೆಯರು ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಜಯಲಕ್ಷ್ಮೀ ಸೀತಾಪುರ ಅವರಿಗೆ ನುಡಿನಮನ ಸಲ್ಲಿಸಿ ಮಾತನಾಡಿದರು. ಜಯಲಕ್ಷ್ಮೀ ಸೀತಾಪುರ ಅವರು ಸದ್ದಿಲ್ಲದೆ ಆಯ್ಕೆಗಳನ್ನು ಸ್ವೀಕರಿಸಿ ಮುನ್ನಡೆದವರು. ಅಂತಹ ವ್ಯಕ್ತಿತ್ವ ಅವರಲ್ಲಿತ್ತು. ಸ್ವಭಾವಗಳನ್ನು ಮೀರಿದ ಸ್ನೇಹ ಅವರದು ಎಂದು ಬಣ್ಣಿಸಿದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಜಯಲಕ್ಷ್ಮೀ ಸೀತಾಪುರ ಅವರು ಹಾಸ್ಯದಲ್ಲಿ ಭಾಷಣ ಮಾಡಿ ಒಂದು ಜಾನಪದ ಗೀತೆ ಹಾಡುತಿದ್ದರು. ಅವರಿಗೆ ಪರಿಚಯ ಆದವರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಕುಸ್ತಿಯ ಬಗ್ಗೆ ಪುಸ್ತಕ ಬರೆದಿದ್ದಾರೆ. ಜಾನಪದ ಕ್ಷೇತ್ರದಲ್ಲಿ ಅದ್ಭುತವಾದ ಸಾಧನೆ ಮಾಡಿರುವ ಅವರ ನೆನಪು ಸದಾ ಇರುತ್ತದೆ ಎಂದು ಹೇಳಿದರು.

ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಮಾತನಾಡಿ, ಕುಟುಂಬ ನಿರ್ವಹಣೆ ಹಾಗೂ ಜಾನಪದ ಕ್ಷೇತ್ರದಲ್ಲಿ ಜಯಲಕ್ಷ್ಮೀ ಸೀತಾಪುರ ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರಲ್ಲಿ ಅದ್ಭುತವಾದ ಕಲೆ, ಪ್ರತಿಭೆ, ಅಧ್ಯಯನ, ಜ್ಞಾನ ಸಂಪಾದನೆಯಿತ್ತು. ಇವರ ಸಾಧನೆಯನ್ನು ಸರ್ಕಾರ ಗುರುತಿಸಬೇಕಿತ್ತು ಎಂದು ಹೇಳಿದರು.

ಹಿರಿಯ ವಿದ್ವಾಂಸ ಕ್ಯಾತನಹಳ್ಳಿ ರಾಮಣ್ಣ ಮಾತನಾಡಿ, ಜಯಲಕ್ಷ್ಮೀ ಅವರು ಕ್ಷೇತ್ರ ಕಾರ್ಯದಲ್ಲಿ ದೂರದ ಹಳ್ಳಿಗಳಿಗೆ ಏಕಾಂಗಿಯಾಗಿ ಹೋಗಿ ಸಾಹಿತ್ಯ ಸಂಗ್ರಹ ಮಾಡಿಕೊಂಡು ಬರುತ್ತಿದ್ದದ್ದು ಪ್ರಶಂಸನೀಯವಾದದ್ದು ಎಂದು ಹೇಳಿದರು.

ಸಾಹಿತಿ ಪ್ರೊ.ವ.ನಂ.ಶಿವರಾಮು, ಡಾ.ಎಚ್.ಪಿ.ಗೀತಾ, ಡಾ.ಎನ್.ಎಸ್.ದೇವಿಕಾ, ಎಚ್.ಆರ್.ಧನ್ಯಕುಮಾರ್, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಿ.ಪಿ.ಸ್ವಾಮಿ, ಜಾನಪದ ಜನ್ನೆಯರು ಸಂಘದ ಅಧ್ಯಕ್ಷೆ ಡಾ.ಎಸ್.ಸಿ.ಮಂಗಳಾ, ಪ್ರೊ.ಜಿ.ಉಷಾರಾಣಿ, ಮಂಡ್ಯ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಕಾರಸವಾಡಿ ಮಹದೇವು, ಜಾನಪದ ಸಂಘಟಕ ಕೆ.ಎಂ.ಕೃಷ್ಣೇಗೌಡ ಕೀಲಾರ ಇತರರಿದ್ದರು. ಇದೇ ವೇಳೆ ಕೀಲಾರ ಕ್ಷೀರಸಾಗರ ಮಿತ್ರಕೂಟದ ಕಲಾವಿದರು ತತ್ವಪದ ಗಾಯನ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net