

ಪುತ್ತೂರು ಗ್ರಾಮಾಂತರ: ಒಂದೂವರೇ ವರ್ಷದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿಯೊಬ್ಬನ ಹೊಟ್ಟೆನೋವು ಸಮಸ್ಯೆಯನ್ನು ಕೇವಲ 15 ದಿನಗಳಲ್ಲಿ ಗುಣಪಡಿಸಿದ ಈಶ್ವರಮಂಗಲದ ವೈದ್ಯ ಶ್ರೀಕುಮಾರ್ ಕತ್ರಿಬೈಲು ಅವರನ್ನು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಕಾವು ಘಟಕ ವತಿಯಿಂದ ಸನ್ಮಾನಿಸಲಾಯಿತು.
ಮಾಡ್ನೂರು ಗ್ರಾಮದ ಕಾವು ವ್ಯಾಪ್ತಿಯ 8ನೇ ತರಗತಿ ವಿದ್ಯಾರ್ಥಿ ಶ್ರೇಯಸ್ ಕಳೆದ ಒಂದೂವರೇ ವರ್ಷದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ. ಹಲವು ವೈದ್ಯರ ಚಿಕಿತ್ಸೆಯ ಬಳಿಕವೂ ಚೇತರಿಸಿಕೊಳ್ಳದ ಆತನಿಗೆ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿಸುವ ಸ್ಥಿತಿ ಎದುರಾಗಿತ್ತು. ಇದರಿಂದಾಗಿ ಆತನ ಪೋಷಕರು ಕಂಗಾಲಾಗಿದ್ದರು. ಈ ವಿಚಾರ ಅರಿತ ಡಾ.ಶ್ರೀಕುಮಾರ್ ಕತ್ರಿಬೈಲು ಕಾಯಿಲೆಯನ್ನು ಸವಾಲಾಗಿ ಸ್ವೀಕರಿಸಿದ್ದರು. ಮಂಗಳೂರಿನ ವೈದ್ಯ ರಾಜೇಶ್ ಬಲ್ಲಾಳ್ ಮತ್ತು ಡಾ.ಶ್ರೀಕುಮಾರ್ ಕೇವಲ 15 ದಿನಗಳಲ್ಲಿ ವಿದ್ಯಾರ್ಥಿಯ ಹೊಟ್ಟೆನೋವು ಕಾಯಿಲೆಯನ್ನು ಗುಣಪಡಿಸಿದ್ದರು. ಡಾ.ರಾಜೇಶ್ ಬಲ್ಲಾಳ್ ಅವರ ಆರಂಭಿಕ ಔಷಧ ಬಳಿಕ ಅವರ ಸಲಹೆ ಪಡೆದು ಡಾ.ಶ್ರೀಕುಮಾರ್ ಅವರೇ ಚಿಕಿತ್ಸೆ ಮುಂದುವರಿಸಿದ್ದರು.
ಡಾ.ಶ್ರೀಕುಮಾರ್ ಅವರ ಸೇವೆಯನ್ನು ಗುರುತಿಸಿ ಪುತ್ತಿಲ ಪರಿವಾರ ಕಾವು ಘಟಕದ ಅಧ್ಯಕ್ಷ ಹರೀಶ್ ಕುಂಜತ್ತಾಯ, ಪದಾಧಿಕಾರಿಗಳಾದ ಯೋಗೀಶ್ ಕಾವು, ರವಿಪ್ರಸಾದ್ ರೈ ಕಾವು, ಸುಧೀಂದ್ರ ಕಾವು, ಅಮೃತಲಿಂಗಂ ಕಾವು, ನಿರಂಜನ್ ರಾವ್ ಕಾವು ಮತ್ತು ಚಿದಾನಂದ ಆಚಾರ್ಯ ಕಾವು ಅವರು ಡಾ.ಶ್ರೀಕುಮಾರ್ ಮನೆಗೆ ತೆರಳಿ ಸನ್ಮಾನಿಸಿದರು.