

ಮಡಿಕೇರಿ: ಬಾಳುಗೋಡುವಿನಲ್ಲಿ ಆಯೋಜಿಸಿದ್ದ ಕೊಡವ ಸಮಾಜಗಳ ಒಕ್ಕೂಟದ ಮಾಸಿಕ ಸಭೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪರನ್ನು ಸನ್ಮಾನಿಸಲಾಯಿತು.
ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ದಾಖಲೆಗಳಲ್ಲಿ ಕೊಡಗರು ಎಂದು ಉಲ್ಲೇಖವಾಗಿರುವುದನ್ನು ಕೊಡವರು ಎಂದು ಮಾರ್ಪಡಿಸಲು ಕಾರಣಕರ್ತರಾದ ಎನ್.ಯು.ನಾಚಪ್ಪರವರ ಪ್ರಯತ್ನವನ್ನು ಶ್ಲಾಘಿಸಲಾಯಿತು. ನಂತರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಂದಿನೆರವಂಡ ನಾಚಪ್ಪ, ಕೊಡವ ಜನಾಂಗದ ಪರವಾಗಿ ನಿರಂತರವಾಗಿ ಹೋರಾಟ ನಡೆಸುವುದಾಗಿ ತಿಳಿಸಿದರು.
ನವೆಂಬರ್‌ನಲ್ಲಿ ಕೊಡವ ನಮ್ಮೆ: ಬಾಳುಗೋಡು ಕೊಡವ ಸಮಾಜದಲ್ಲಿ ಪ್ರತಿವರ್ಷ ನಡೆಸುವ ಕೈಲುಮೂರ್ತ ಹಬ್ಬವನ್ನು ಈ ಬಾರಿ ಸೆ.೯ ರಂದು ನಡೆಸಲು ಮತ್ತು ಕೊಡವ ನಮ್ಮೆಯನ್ನು ನ.೧೭, ೧೮ ಹಾಗೂ ೧೯ ರಂದು ಆಯೋಜಿಸಲು ಸಭೆ ನಿರ್ಧರಿಸಿತು.
ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪರವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೌರವಾಧ್ಯಕ್ಷ ಪರದಂಡ ಸುಬ್ರಮಣಿ, ಉಪಾಧ್ಯಕ್ಷರಾದ ಮಲಚ್ಚೀರ ಬೋಸ್, ಮಾಳೇಟಿರ ಅಭಿಮನ್ಯು ಕುಮಾರ್, ಕರವಟ್ಟೀರ ಪೆಮ್ಮಯ್ಯ, ಖಜಾಂಚಿ ಚೆರಿಯಪಂಡ ಕಾಶಿಯಪ್ಪ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.