ಓದಿನಷ್ಟೇ ಕ್ರೀಡೆಗೂ ಪ್ರಾಮುಖ್ಯತೆ ಇರಲಿ: ರೈತ ಸಂಘದ ವರಿಷ್ಠೆ ಸುನೀತಾ ಪುಟ್ಟಣ್ಣಯ್ಯ ಕಿವಿಮಾತು

Tribute to athletes mandya
Published on

ಪಾಂಡವಪುರ: ಕ್ರೀಡೆಯಲ್ಲಿ ಸಾಧನೆ ಮಾಡಿದರೆ ಉನ್ನತ ಉದ್ಯೋಗ ಸಿಗುತ್ತದೆ. ಆದ್ದರಿಂದ ಓದಿನಷ್ಟೆ ಕ್ರೀಡೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ರೈತ ಸಂಘದ ವರಿಷ್ಠೆ ಸುನೀತಾ ಪುಟ್ಟಣ್ಣಯ್ಯ ಹೇಳಿದರು.

ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ವಿಶ್ವೇಶ್ವರಯ್ಯ ಪ್ರೌಢಶಾಲೆ ಆವರಣದಲ್ಲಿ ವೆಂಕಟೇಗೌಡ ಸೇವಾ ಸಮಿತಿ ಹಾಗೂ ರಂಗಕೃಷಿ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಕ್ರೀಡಾಪಟುಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಕ್ಯಾತನಹಳ್ಳಿ ಗ್ರಾಮದವರು ಕ್ರೀಡೆಯಲ್ಲಿ ಸಾಧನೆ ಮಾಡಿದ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಜತೆಗೆ ಉತ್ತಮ ಬದುಕು ನಡೆಸುತ್ತಿದ್ದಾರೆ. ಹೀಗಾಗಿ ವ್ಯಕ್ತಿಯ ಜೀವನ ರೂಪಿಸುವ ಕ್ರೀಡೆಗೆ ಹೆಚ್ಚು ಮಹತ್ವ ನೀಡುವ ಅಗತ್ಯವಿದೆ ಎಂದರು.

ಇತ್ತೀಚೆಗೆ ದಕ್ಷಿಣ ಆಫ್ರಿಕಾ ಹಾಗೂ ಮಲೇಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಕ್ಯಾತನಹಳ್ಳಿ ಗ್ರಾಮದ ಲಿಖಿತಾ ಮತ್ತು ವರುಣ್ ಸಾಧನೆ ಮಾಡಿರುವುದು ಶ್ಲಾಘನೀಯ. ಈ ಇಬ್ಬರು ಕ್ರೀಡಾಪಟುಗಳು ಇತರೆ ಕ್ರೀಡಾಪಟುಗಳಿಗೆ ದಾರಿದೀಪವಾಗಬೇಕು ಎಂದು ಸಲಹೆ ನೀಡಿದರು.

ಪ್ರೇರಣಾ ಸ್ಕ್ಯಾನಿಂಗ್ ಸೆಂಟರ್ ಮುಖ್ಯಸ್ಥ ವಿ.ಎ.ಪಾಟೀಲ್ ಮಾತನಾಡಿ, ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಚಿನ್ನದ ಪದಕ ಗಿಟ್ಟಿಸಬೇಕೆಂದೆನಿಲ್ಲ. ಲಿಖಿತಾ ಅವರು ಟೆನಿಕಾಯ್ಟ್ ಅವರು ಕಂಚಿನ ಪದಕ ಗಿಟ್ಟಿಸಿರುವುದು ನಿಜಕ್ಕೂ ಸಂತಸ ಮೂಡಿಸಿದೆ ಎಂದರು.

ಅರ್ಜುನ್ ಪ್ರಶಸ್ತಿ ವಿಜೇತ ಎಚ್.ಟಿ.ಎಂ.ಪ್ರಕಾಶ್ ಮಾತನಾಡಿ, ಕ್ರೀಡಾಪಟುಗಳಿಗೆ ಸರಿಯದ ಉತ್ತೇಜನ, ಪ್ರೋತ್ಸಾಹ ಹಾಗೂ ಉತ್ತಮ ತರಬೇತುದಾರರು ಸಿಕ್ಕಿದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.

ದೊಡ್ಡಗೌಡನಕೊಪ್ಪಲು ನಿವೃತ್ತ ಪ್ರಾಂಶುಪಾಲ ಡಾ.ಎನ್.ನಾಗರಾಜು, ವಿಶ್ವೇಶ್ವರಯ್ಯ ಎಜುಕೇಷನ್ ಸೊಸೈಟಿ ಅಧ್ಯಕ್ಷ ಕೆ.ಟಿ.ಗೋವಿಂದೇಗೌಡ, ವೆಂಕಟೇಗೌಡ ಸೇವಾ ಸಮಿತಿ ಅಧ್ಯಕ್ಷ ಡಾ.ಕೆ.ವೈ.ಶ್ರೀನಿವಾಸ್, ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾರೋಹಳ್ಳಿ ಧನ್ಯಕುಮಾರ್, ಉಮೇಶ್(ಕಬಡ್ಡಿ ಬೊಮ್ಮಣ್ಣ), ಕೆ.ಜಿ.ಜ್ಞಾನೇಶ್, ವಕೀಲ ಮೋಹನ್, ರಂಗನಾಥ್, ಮಾಸ್ತಿಗೌಡ, ಕೆ.ಪಿ.ಮಹದೇವ ಇತರರಿದ್ದರು.

ಇದೇ ವೇಳೆ ಮಲೇಷ್ಯಾದಲ್ಲಿ ನಡೆದ ಖೋಖೋ ಟೂರ್ನಿಯಲ್ಲಿ ಪ್ರಥಮ ಸ್ಥಾನದ ಮೂಲಕ ಕೆ.ವರುಣ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆನ್ನಿಕಾಯ್ಟಿನಲ್ಲಿ ತೃತೀಯ ಸ್ಥಾನ ಪಡೆದ ಲಿಖಿತಾ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net