

ಮಂಡ್ಯ: ದಕ್ಷಿಣ ಭಾರತದ ಬಹುಭಾಷ ನಟಿ ಲೀಲಾವತಿ ಅವರ ಅಭಿನಯ ಅಮೋಘ ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಹೇಳಿದರು.
ನಗರದ ಸೇವಾಕಿರಣ ಸಭಾಂಗಣದಲ್ಲಿ ಕೃಷಿಕ ಲಯನ್ಸ್ ಸಂಸ್ಥೆ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ಹಿರಿಯ ನಟಿ ಲೀಲಾವತಿ ಅವರಿಗೆ ಶ್ರದ್ಧಾಂಜಲಿ ಹಾಗೂ ಗೀತನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಡು ಕಂಡ ಅಪ್ರತಿಮ ರಂಗಭೂಮಿ ಕಲಾವಿದೆ, ಚಲನಚಿತ್ರ ನಾಯಕನಟಿ ಲೀಲಾವತಿ ಅವರು ಒಂದಷ್ಟು ವರ್ಷ ಪ್ರಗತಿಪರ ಕೃಷಿಕರಾಗಿಯೂ ಮಾದರಿ ಜೀವನ ನಡೆಸಿದರು. ಅನೇಕ ಕೊಡುಗೆಗಳನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ಸ್ಮರಿಸಿದರು.
ಮಂಗಳೂರಿನಲ್ಲಿ ಹುಟ್ಟಿ ಬೆಳೆದು 2ನೇ ತರಗತಿ ಓದಿ, ಬಡತನದಲ್ಲಿ ಬೆಳೆದು ರಂಗಭೂಮಿ ಆಸಕ್ತಿಯಿಂದ ಮೈಸೂರಿಗೆ ಬಂದರು. ನಂತರ ಸಿನಿಮಾ ರಂಗದಲ್ಲಿ ಹಲವು ದಶಕ ಮನೋಜ್ಞ ಅಭಿನಯ ನೀಡಿ ಪಾತ್ರಗಳಿಗೆ ಜೀವತುಂಬಿ ರಾಜ್ಯ, ರಾಷ್ಟಮಟ್ಟದ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿದ್ದಾರೆ. ಬಡಜನರ ಸೇವೆಗಾಗಿ ಲೀಲಾವತಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಆಸ್ಪತ್ರೆಗಳನ್ನು ಕಟ್ಟಿಸಿದ್ದಾರೆ ಎಂದು ಹೇಳಿದರು.
ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್, ಕೃಷಿಕ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳಾದ ಮೋಹನ್‌ಕುಮಾರ್, ನೀನಾಪಟೇಲ್, ರತ್ನಮ್ಮ, ಜೋಗಿಗೌಡ ಇತರರಿದ್ದರು.