ಪದ್ಮನಾಭ ಮಾಣಿಂಜರ ಶಿಸ್ತು ಎಲ್ಲರಿಗೂ ಆದರ್ಶ : ಪ್ರೀತಿತಾ ಧರ್ಮ ವಿಜೇತ್ ಹೇಳಿಕೆ

New Project (28)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಪದ್ಮನಾಭ ಮಾಣಿಂಜರ ದಕ್ಷತೆ, ಪ್ರಾಮಾಣಿಕತೆ, ಶಿಸ್ತು ಎಲ್ಲರಿಗೂ ಆದರ್ಶ. ಅವರಿಗೆ ಬಡವರ ಬಗೆ ಅಪಾರ ಕಾಳಜಿ ಇತ್ತು. ಬಡತನದ ನೋವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ ಕಾರಣಕ್ಕಾಗಿ ಅವರು ಗುರುದೇವ ವಿದ್ಯಾಸಂಸ್ಥೆ ಪ್ರೇರಣಾ ಶಕ್ತಿಯಾಗಿದ್ದರು ಎಂದು ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ಸದಸ್ಯೆ ಪ್ರೀತಿತಾ ಧರ್ಮ ವಿಜೇತ್ ಹೇಳಿದರು.

ಶುಕ್ರವಾರ ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನಲ್ಲಿ ಇತ್ತೀಚೆಗೆ ನಿಧನರಾದ, ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ಉಪಾಧ್ಯಕ್ಷ ಪದ್ಮನಾಭ ಮಾಣಿಂಜರಿಗೆ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿ, ಒಂದು ವರ್ಷದ ಅವಧಿಯಲ್ಲಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದ ಕೆ.ವಸಂತ ಬಂಗೇರ ಮತ್ತು ಪದ್ಮನಾಭ ಮಾಣಿಂಜ ಎಂಬ ಸಂಸ್ಥೆ ಎರಡು ಆಧಾರ ಕಂಬಗಳನ್ನು ಕಳೆದುಕೊಂಡಿದ್ದೇವೆ. ಮಾಣಿಂಜರಿಗೆ ಕಾಲೇಜಿನ ಬಗೆಗೆ ಅಪಾರ ಪ್ರೀತಿ ಬೆಳೆಸಿಕೊಂಡಿದ್ದರು. ಜನ ಸಾಮಾನ್ಯ, ಬಡವರ ಬಗ್ಗೆ ಅವರಿಗಿದ್ದ ಕಾಳಜಿ ಅಪಾರವಾದುದು. ತನ್ನ ಕರ್ತವ್ಯದ ಬಗ್ಗೆ ಅಪಾರ ಶ್ರದ್ಧೆ ಬೆಳೆಸಿಕೊಂಡಿದ್ದರು. ಆಡಳಿತಾತ್ಮಕ ವಿಚಾರದಲ್ಲಿ ಅವರ ಅನುಭವ ಅನನ್ಯವಾದುದು ಎಂದರು.

ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಡಾ.ಸವಿತಾ ಮಾತನಾಡಿ, ಪದ್ಮನಾಭ ಮಾಣಿಂಜರ ಕಾರ್ಯದಕ್ಷತೆ ಆದರ್ಶಯುತವಾದುದು. ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಬೆಳೆಸಿಕೊಳ್ಳಬೇಕು ಎಂಬುದು ಅವರ ನಿಲುವಾಗಿತ್ತು. ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘ ಅಧ್ಯಕ್ಷರಾಗಿ ತನ್ನ ಅಧಿಕಾರದ ಅವಧಿಯಲ್ಲಿ ಸಂಘದ ವತಿಯಿಂದ 20 ಲಕ್ಷ ರೂ.ಗೂ ಅಧಿಕ ವಿದ್ಯಾರ್ಥಿವೇತನ ನೀಡಿ ವಿದ್ಯಾರ್ಥಿಗಳಿಗೆ, ಸಂಸ್ಥೆಗೆ ನೆರವಾಗುವ ಕಾರ್ಯ ಮಾಡಿದ್ದರು ಎಂದರು.

ಶ್ರೀ ಗುರುದೇವ ಪದವಿ ಪೂರ್ವ ಕಾಲೇಜು ಉಪ ಪ್ರಾಂಶುಪಾಲ ಬಿ.ಎ.ಸಮೀವುಲ್ಲಾ ಮಾತನಾಡಿ, ಕಾಲೇಜು ಆರಂಭದಲ್ಲಿ ಅವರ ಕಾಣಿಕೆ ಅಪಾರವಾದುದು. ಯಾವುದೇ ವಿಚಾರದಲ್ಲಿ ಸ್ಪಷ್ಟ ನಿಲುವು ಬೆಳೆಸಿಕೊಂಡವರು. ಕಾಲೇಜನ್ನು ಜಿಲ್ಲೆಯಲ್ಲಿ ಒಂದು ಮಾದರಿ ಕಾಲೇಜು ಮಾಡಬೇಕೆಂಬುದು ಅವರ ಕನಸಾಗಿತ್ತು ಎಂದರು.

ಉಪನ್ಯಾಸಕರಾದ ಹರೀಶ್ ಪೂಜಾರಿ, ರಾಕೇಶ್ ಕುಮಾರ್ ಮಾತನಾಡಿದರು. ಪದ್ಮನಾಭ ಮಾಣಿಂಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕಾಲೇಜು ಉಪನ್ಯಾಸಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸುಕೇಶ್ ಕುಮಾರ್ ಸ್ವಾಗತಿಸಿದರು. ಪದವಿ ಕಾಲೇಜು ಕನ್ನಡ ಉಪನ್ಯಾಸಕ ಸತೀಶ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net