

ಜನೋಪಯೋಗಿ ಯೋಜನೆಗಳ ರೂವಾರಿ ದೇಶಕ್ಕೆ ಮನಮೋಹನ್ ಸಿಂಗ್ ಅವರು ಸುದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. ಅವರ ಅಗಲಿಕೆಯಿಂದ ಅಪಾರ ನಷ್ಟವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಷಂಷೀರ್ ಅಹಮದ್ ಹೇಳಿದರು.
ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ, ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಗತ್ತಿನ ಆರ್ಥಿಕ ಕ್ಷೇತ್ರ ಸೇರಿ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆಗೈದಿರುವ ಸಿಂಗ್ ಅವರು ಪ್ರಾಮಾಣಿಕ ಪ್ರಧಾನಿಯಾಗಿ ದೇಶವನ್ನು ಆರ್ಥಿಕವಾಗಿ ಮೇಲೆತ್ತಿದರು. ಆಹಾರ ಭದ್ರತೆ, ನರೇಗಾ, ಶಿಕ್ಷಣ, ಆರ್ಟಿಐ, ಆರೋಗ್ಯ, ಸೇರಿ ಜನೋಪಯೋಗಿ ಯೋಜನೆಗಳನ್ನು ಮೂಲ ಹಕ್ಕುಗಳನ್ನಾಗಿ ಮಾಡಿದರು ಎಂದು ನೆನೆದರು.
ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ. ಮಹೇಶ್ವರಪ್ಪ ಮಾತನಾಡಿ, ಮನಮೋಹನ ಸಿಂಗ್ ಅವರ ಜ್ಞಾನ ದೇಶದ ಅನೇಕ ಸಮಸ್ಯೆ ಪರಿಹರಿಸಲು ಸಾಧ್ಯವಾಯಿತು. ಗರ್ವದಿಂದ ನಡೆದುಕೊಳ್ಳದೆ ವಿನಯಶೀಲ ವ್ಯಕ್ತಿಯಾಗಿ ದೇಶದ ಸೇವೆಗೆ ತಮ್ಮ ಜೀವನ ಮುಡಿಪಾಗಿಟ್ಟರು. ಅವರ ಅಗಲಿಕೆಯಿಂದ ದೇಶವೇ ಕತ್ತಲಲ್ಲಿ ಮುಳುಗಿದಂತಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ಸಿ. ಲಕ್ಷ್ಮಣ್, ಮುಖಂಡರಾದ ಕಾಂತರಾಜ್, ವೆಂಕಟೇಶ್, ಹಟ್ಟಿ ತಿಪ್ಪೇಸ್ವಾಮಿ, ಹೊನ್ನೂರಪ್ಪ, ಬಾಬುರಾಜೇಂದ್ರ ಪ್ರಸಾದ್, ನಾಗೇಶ್, ಬಸವರಾಜ್, ಜಯಣ್ಣ ಇತರರಿದ್ದರು.