ಡಾ.ಜಯಲಕ್ಷ್ಮೀ ಸೀತಾಪುರ ನಿಧನ ಜಾನಪದ ಕ್ಷೇತ್ರಕ್ಕೆ ಅಪಾರ ನಷ್ಟ: ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹೇಳಿಕೆ

Tribute meeting from Kasapa Mandya
Published on

ಮಂಡ್ಯ: ಡಾ.ಜಯಲಕ್ಷ್ಮೀ ಸೀತಾಪುರ ಅವರ ನಿಧನದಿಂದ ಜಾನಪದ ಕ್ಷೇತ್ರ ಹಾಗೂ ನಮ್ಮ ಜಿಲ್ಲೆಗೆ ಅಪಾರ ನಷ್ಟವಾಗಿದೆ ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು ವಿಷಾಧ ವ್ಯಕ್ತಪಡಿಸಿದರು.

ನಗರದ ಬಂದೀಗೌಡ ಬಡಾವಣೆಯಲ್ಲಿರುವ ಕಸಾಪ ಕಚೇರಿಯಲ್ಲಿ ಜಿಲ್ಲಾ ಮತ್ತು ತಾಲೂಕು ಕಸಾಪ ವತಿಯಿಂದ ಆಯೋಜಿಸಿದ್ದ ಇತ್ತೀಚೆಗೆ ನಿಧನರಾದ ಜಾನಪದ ತಜ್ಞೆ, ನಿವೃತ್ತ ಪ್ರಾಧ್ಯಾಪಕಿ ಡಾ.ಜಯಲಕ್ಷ್ಮೀ ಸೀತಾಪುರ ಶ್ರದ್ಧಾಂಜಲಿ ಸಲ್ಲಿಸುವ ಸಭೆಯಲ್ಲಿ ಮಾತನಾಡಿದ ಅವರು, ಡಾ.ಜಯಲಕ್ಷ್ಮೀ ಪಾಂಡವಪುರ ತಾಲೂಕಿನ ಸೀತಾಪುರದ ಪ್ರತಿಭಾನ್ವಿತ ಮಗಳು. ಅವರು ಮೈಸೂರು ವಿವಿ ಜಾನಪದ ಎಂ.ಎ ಪದವಿ ಪಡೆದು, ಸಂಶೋಧನಾ ಸಹಾಯಕರಾಗಿ ಕಾರ್ಯನಿರ್ವಹಿಸಿದರು. ನಂತರ ಕನ್ನಡದಲ್ಲಿ ಐತಿಹಾಸಿಕ ಜಾನಪದ ಮಹಾಕಾವ್ಯಗಳು ಕುರಿತು ಪಿ.ಎಚ್‌ಡಿ ಪದವಿ ಪಡೆದರು. ಸಂಸ್ಥೆಯ ಜಾನಪದ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದರು ಎಂದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಡಾ.ಜಯಲಕ್ಷ್ಮೀ ಅವರ ಅಕಾಲಿಕ ನಿಧನ ನೋವು ತಂದಿದೆ. ಎಲ್ಲರೊಂದಿಗೆ ಸ್ನೇಹಮಯ ಒಡನಾಟ, ಸದಾ ಹಾಸ್ಯಭರಿತ ಮಾತುಗಳನ್ನಾಡುತ್ತಿದ್ದ ಅವರು ಜಾನಪದ ಗಾಯಕಿಯೂ ಆಗಿದ್ದರು. ಅಗಾಧವಾದ ಸಾಹಿತ್ಯ ಪ್ರತಿಭೆ ಇತ್ತು. ಇವರ ಮಾರ್ಗದರ್ಶನದಲ್ಲಿ ಹಲವರು ಪಿ.ಎಚ್‌ಡಿ ಪದವಿ ಪಡೆದಿದ್ದರು ಎಂದು ನೆನಪಿಸಿಕೊಂಡರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಜಿ.ಟಿ.ವೀರಪ್ಪ ಮಾತನಾಡಿ, 70ರ ದಶಕದಲ್ಲಿ ಮೈಸೂರು ವಿವಿಯಲ್ಲಿ ತಮ್ಮ ಸಹಪಾಠಿಯಾಗಿದ್ದ ಅವರು ಜಾನಪದದಲ್ಲಿ ಪಿ.ಎಚ್‌ಡಿ ಗಳಿಸಿದರು. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಲ್ಲರೊಂದಿಗೆ ಉತ್ತಮವಾದ ಒಡನಾಟ ಇಟ್ಟುಕೊಂಡಿದ್ದರು. ಆತ್ಮೀಯತೆ ವಿಶ್ವಾಸ ಹೊಂದಿದ್ದರು. ಜಾನಪದದಲ್ಲಿ ಅಪಾರ ವಿದ್ವತ್ ಹೊಂದಿದ್ದರು. ಜಾನಪದ ತಜ್ಞ ಜೀ.ಶಂ.ಪರಮಶಿವಯ್ಯ ಅವರ ಶಿಷ್ಯರಾಗಿ ಜಾನಪದ ಕ್ಷೇತ್ರ ಆರಿಸಿಕೊಂಡು ಜಾನಪದ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ ಮಾತನಾಡಿ, ಸರಳ ಸಜ್ಜನಿಕೆ ಹಸನ್ಮುಖ ಅವರ ಆಭರಣವಾಗಿತ್ತು. ಜಾನಪದದಲ್ಲಿ ಆಳವಾದ ಜ್ಞಾನ ಇತ್ತು. ಅವರ ಕೆಲಸ ಮತ್ತು ಅವರು ರಚಿಸಿದ ಕೃತಿಗಳನ್ನು ಓದಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಧನಂಜಯ ದರಸಗುಪ್ಪೆ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಸಂಘ ಸಂಸ್ಥೆ ಪ್ರತಿನಿಧಿ ಹೊಳಲು ಶ್ರೀಧರ್, ಮಂಡ್ಯ ತಾಲೂಕು ಕಸಾಪ ಅಧ್ಯಕ್ಷ ಚಂದ್ರಲಿಂಗು ಗಾಣದಾಳು, ಶ್ರೀರಂಗಪಟ್ಟಣ ಕಸಾಪ ಅಧ್ಯಕ್ಷ ಮಂಜುನಾಥ್ ಬಲ್ಲೇನಹಳ್ಳಿ, ಮಂಡ್ಯ ನಗರ ಘಟಕ ಅಧ್ಯಕ್ಷೆ ಸುಜಾತಾ ಕೃಷ್ಣ, ಚಿಕ್ಕತಿಮ್ಮಯ್ಯ, ರಾಮಕೃಷ್ಣ, ಬಿ.ಜಿ.ಉಮಾ, ಶೋಭಾ, ಸುವರ್ಣಾವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net