

ಹರಿಹರ: ಸತ್ಯ-ಶುದ್ಧ ಮತ್ತು ಸರಳತೆಯೇ ನಿಜವಾದ ಧರ್ಮ. ಧರ್ಮದ ಬಗ್ಗೆ ಹಗುರ ಮಾತನಾಡುವವರು ಮೊದಲು ಇದನ್ನು ಆರಿತುಕೊಳ್ಳಲಿ ಎಂದು ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಹೇಳಿದರು.
ತಾಲೂಕಿನ ಬೆಳ್ಳೂಡಿ ಗ್ರಾಮದಲ್ಲಿ ತಾಲೂಕು ಸಾಧು ವೀರಶೈವ ಸಮಾಜದಿಂದ ಶುಕ್ರವಾರ ಹಮ್ಮಿಕೊಂಡಿದ್ದ ತರಳಬಾಳು ಬೃಹನ್ಮಠದ ಲಿಂ.ಶಿವಕುಮಾರ ಶಿವಾಚಾರ್ಯ ಶ್ರೀಗಳ 31ನೇ ಶ್ರದ್ಧಾಂಜಲಿ ಹಾಗೂ ಆರೋಗ್ಯ ತಪಾಸಣಾ ಶಿಬಿರದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಇತ್ತೀಚೆಗೆ ರಾಜಕಾರಿಣಿಯೊಬ್ಬರು ಸನಾತನ ಧರ್ಮವನ್ನು ಡೆಂೆ ಮತ್ತು ಕರೊನಾ ಕಾಯಿಲೆಗಳಿಗೆ ಹೋಲಿಸಿ ಮಾತನಾಡಿದ್ದು ಆವರ ವಿಕೃತತೆಯನ್ನು ತೊರಿಸುತ್ತದೆ. ಯಾವುದಾದರೂ ಧರ್ಮ ಸಾಂಕ್ರಮಿಕ ರೋಗವಾಗಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಧರ್ಮದ ಬಗ್ಗೆ ಮಾತನಾಡಲು ಸಾಧು ಸಂತರಿದ್ದಾರೆ. ರಾಜಕಾರಣಿಗಳು ರಾಜಕೀಯ ಮಾಡಿದರೆ ಸಾಕು ಎಂದರು.
ಪಂಚಮಸಾಲಿ ಪೀಠದ ವಚನಾನಂದ ಶ್ರೀ ಮಾತನಾಡಿ, ಲಿಂ.ಶಿವಕುಮಾರ ಸ್ವಾಮೀಜಿಗಳು ದೈಹಿಕವಾಗಿ ನಮ್ಮ ಜತೆ ಇಲ್ಲದಿರಬಹುದು. ಆದರೆ, ಅವರು ಹೇಳಿಕೊಟ್ಟ ವಿಚಾರಧಾರೆ, ಮಾರ್ಗದರ್ಶನ, ತಿಳವಳಿಕೆಗಳು ಸದಾ ನಮ್ಮ ಜತೆಯಲ್ಲಿ ಇರುತ್ತವೆ ಎಂದು ಹೇಳಿದರು.
ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಮಾತನಾಡಿ, ನಾಡಿನಲ್ಲಿ ಅನಕ್ಷರಸ್ಥರು ಕಡಿಮೆಯಾಗುವುದರಲ್ಲಿ ವೀರಶೈವ ಮಠಗಳ ಪಾತ್ರ ದೊಡ್ಡದಿದೆ ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ್ ಮಾತನಾಡಿ, ಸಾಧು ವೀರಶೈವ ಲಿಂಗಾಯತ ಸಮಾಜವು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದು ಕೇವಲ ಕೃಷಿ ಕಾಯಕದಲ್ಲಿ ಮಾತ್ರ ಮಾಡುತ್ತಿದ್ದರು. ನಂತರ ಶೈಕ್ಷಣಿಕ ಪ್ರೋತ್ಸಾಹ ನೀಡಿದ್ದು ಲಿ. ಶಿವಕುಮಾರ ಸ್ವಾಮೀಜಿಗಳು ಎಂದು ವಿವರಿಸಿದರು.
ಶಾಸಕ ಬಿ.ಪಿ. ಹರೀಶ್, ಬೆಳ್ಳೂಡಿ ಗ್ರಾಪಂ ಮಾಜಿ ಆಧ್ಯಕ್ಷ ಸಿದ್ದೇಶ್ ದುಂಡಿ ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ತಾ.ಅಧ್ಯಕ್ಷ ಗೌಡ್ರು ಮಹದೇವಪ್ಪ, ಉಪಾಧ್ಯಕ್ಷ ಹಲಸಬಾಳು ಶಿವಾನಂದಪ್ಪ, ಕಾರ್ಯದರ್ಶಿ ಶಿವಣ್ಣ ಇಟಗಿ, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿ ಸಣ್ಣಗೌಡ್ರು, ಕೆ.ವಿ. ರುದ್ರೇಶ್, ಜಿ. ಹನುಮಂತ ಗೌಡ್ರು ಮತ್ತಿತರರಿದ್ದರು.
ಸಮಾರಂಭದ ನಿಮಿತ್ತ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ನಡೆಸಲಾಯಿತು.