

ಮಡಿಕೇರಿ: ಬುಡಕಟ್ಟು ಕಾರ್ಮಿಕರ ಸಂಘದ ವತಿಯಿಂದ ಪೊನ್ನಂಪೇಟೆ ತಾಲೂಕು ಕುಂದ ಗ್ರಾಮದ ಬಸವೇಶ್ವರ ಬಡಾವಣೆಯಲ್ಲಿ ವಾಸಿಸುತ್ತಿರುವ ಬುಡಕಟ್ಟು ಕುಟುಂಬಗಳಿಗೆ ಹೊಸ ಮನೆಗಳಿಗೆ ಮಂಜೂರಾತಿ ಆದೇಶ ನೀಡುವಂತೆ ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಮುಂಭಾಗ ಸೋಮವಾರ ಆಹೋರಾತ್ರಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವೈ.ಬಿ.ಗಪ್ಪು ಮಾತನಾಡಿ, ಬಸವೇಶ್ವರ ಬಡಾವಣೆಯಲ್ಲಿ ವಾಸಿಸುತ್ತಿರುವ ೧೧೬ ಕುಟುಂಬಗಳಿಗೆ ನಿವೇಶನ ಹಕ್ಕು ಪತ್ರ ನೀಡಿ ೫ ವರ್ಷವಾದರೂ ಇದುವರೆಗು ನಮಗೆ ಸರ್ಕಾರದಿಂದ ಹೊಸ ಮನೆ ಮಂಜೂರಾತಿಯಾಗಿಲ್ಲ. ಈ ಬಗ್ಗೆ ಸಂಘಟನೆ ವತಿಯಿಂದ ಸ್ಥಳೀಯ ಹಾತೂರು ಗ್ರಾಮ ಪಂಚಾಯಿತಿ, ಪೊನ್ನಂಪೇಟೆ ತಾಲೂಕು ಪಂಚಾಯಿತಿ, ಜಿಲ್ಲಾ ಹಾಗು ತಾಲೂಕು ಪರಿಶಿಷ್ಟ ಪಂಗಡಗಳ ಇಲಾಖೆ, ತಹಶೀಲ್ದಾರರು ಹಾಗು ಜಿಲ್ಲಾಧಿಕಾರಿಗಳೊಂದಿಗೆ ಸತತವಾಗಿ ಚರ್ಚೆ ನಡೆಸಿದ ಸಂದರ್ಭ ಮಂಜೂರಾತಿ ಮಾಡುತ್ತೇವೆ ಎಂದ ಸಬೂಬು ನೀಡುತ್ತಲೇ ಬಂದಿದ್ದಾರೆ. ಆದರೆ, ಇರುವರೆಗೆ ಯಾವುದೇ ಮಂಜೂರು ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷೆ ಮಲ್ಲಿಗೆ, ಕಾರ್ಯದರ್ಶಿ ಮಂಜುಳ, ಉಪಕಾರ್ಯದರ್ಶಿ ಚೋಂದು, ಸದಸ್ಯ ಬೋಜ ಹಾಗೂ ಗ್ರಾಮಸ್ಥರು ಇದ್ದರು.