

ಮಡಿಕೇರಿ:
ಜನಸಾಮಾನ್ಯರ ಕಲ್ಯಾಣಕ್ಕಾಗಿ ಸರ್ಕಾರ ವಿವಿಧ ಬಗೆಯ ಯೋಜನೆಗಳನ್ನು ರೂಪಿಸುತ್ತದೆ. ಆದರೆ ಅಧಿಕಾರಿಗಳ ತೀವ್ರ ನಿಗಾ ಮಧ್ಯೆಯೂ ಬಹುತೇಕ ಯೋಜನೆಗಳು ಮೂಲ ಆಶಯವನ್ನೇ ಕಳೆದುಕೊಂಡು ಬಿಡುತ್ತದೆ. ಬುಡಕಟ್ಟು ಜನರಿಗೆ ಪೌಷ್ಠಿಕ ಆಹಾರ ವಿತರಣಾ ಯೋಜನೆಯೂ ಇದೀಗ ಇಂಥ ಪಟ್ಟಿ ಸೇರುವಂತಾಗಿದೆ. ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳು ಪೂರೈಕೆ ಆಗುತ್ತಿರುವ ಬಗ್ಗೆ ಆರೋಪಗಳು ಫಲಾನುಭವಿಗಳಿಂದ ಕೇಳಿಬರುತ್ತಿದೆ.
ಅರಣ್ಯ ಮತ್ತು ಅರಣ್ಯದಂಚಿನ ಪ್ರದೇಶದಲ್ಲಿ ವಾಸ ಮಾಡುವ ಬುಡಕಟ್ಟು ಸಮುದಾಯದ ಜನರು ಆಹಾರದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ ಎನ್ನುವ ಕಾರಣಕ್ಕೆ ಈ ಹಿಂದಿನ ಅವಧಿಯ ಕಾಂಗ್ರೆಸ್ ಸÀರ್ಕಾರ ಇಂಥವರಿಗೆ ಉಚಿತವಾಗಿ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥ ಪೂರೈಕೆ ಯೋಜನೆ ಜಾರಿ ಮಾಡಿತ್ತು. ಆರಂಭದ ದಿನಗಳಲ್ಲಿ ವರ್ಷದಲ್ಲಿ 6 ತಿಂಗಳು ಮಾತ್ರ ಆಹಾರ ವಸ್ತುಗಳನ್ನು ಫಲಾನುಭವಿಗಳಿಗೆ ತಲುಪಿಸಲಾಗುತ್ತಿತ್ತು. ನಂತರ ವರ್ಷದಲ್ಲಿ 6 ಬಾರಿ ಪ್ರತಿ 45 ದಿನಗಳಿಗೆ ಒಮ್ಮೆ ಪೂರೈಕೆ ಮಾಡಲಾಗುತ್ತಿತ್ತು. ಈಗ ವರ್ಷದ 12 ತಿಂಗಳೂ ಸಾಮಾನ್ಯ ಪಡಿತರದ ಜತೆಗೆ ಈ ಪೌಷ್ಠಿಕ ಆಹಾರವನ್ನು ಬುಡಕಟ್ಟು ಜನಾಂಗದ ಜನರಿಗೆ ತಲುಪಿಸಲಾಗುತ್ತಿದೆ.
ಅರಣ್ಯ ಮತ್ತು ಅರಣ್ಯದಂಚಿನ ಪ್ರದೇಶದಲ್ಲಿ ನೆಲೆ ಕಂಡುಕೊAಡಿರುವ ಬಹುತೇಕ ಗಿರಿಜನರು, ಆದಿವಾಸಿಗಳಿಗೆ ಮಳೆಗಾಲದ ಅವಧಿಯಲ್ಲಿ ಆಹಾರದ ಕೊರತೆ ಉಂಟಾಗುತ್ತದೆ. ಉಳಿದ ದಿನಗಳಲ್ಲಿ ಪೌಷ್ಠಿಕಾಂಶಯುಕ್ತ ಆಹಾರ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಪೂರೈಕೆ ಆಗುವ ಈ ಪೌಷ್ಠಿಕ ಆಹಾರ ಪದಾರ್ಥಗಳನ್ನು ಅಂಗನವಾಡಿ ಮೂಲಕ ಫಲಾನುಭವಿಗಳಿಗೆ ತಲುಪಿಸುವ ಕೆಲಸ ನಡೆಯುತ್ತಿದೆ. ಒಂದು ಫಲಾನುಭವಿ ಕುಟುಂಬಕ್ಕೆ ಆಹಾರ ಪದಾರ್ಥ ತಲುಪಿಸಲು ಇಲಾಖೆಯಿಂದ ಅಂಗನವಾಡಿಗೆ 5 ರೂ. ಕೊಡಲಾಗುತ್ತದೆ. ಅಂಗನವಾಡಿಗೆ ಬರುವ ಆಹಾರ ಪದಾರ್ಥಗಳನ್ನು ನಿಗದಿಯಂತೆ ಆದಿವಾಸಿ ಕುಟುಂಬಗಳಿಗೆ ತಲುಪಿಸುವ ಕೆಲಸ ಮಾಡಲಾಗುತ್ತದೆ.
ಯೋಜನೆಯ ಪ್ರಕಾರ ಪ್ರತಿ ತಿಂಗಳೂ ಬುಡಕಟ್ಟು ಸಮುದಾಯದ ಒಂದು ಕುಟುಂಬಕ್ಕೆ ತಲಾ 8 ಕೆಜಿ ಅಕ್ಕಿ ಅಥವಾ ಗೋಧಿ ಅಥವಾ ರಾಗಿ, 3 ಕೆ.ಜಿ. ತೊಗರಿ ಬೇಳೆ, 1 ಕೆಜಿ ಕಡಲೆ ಕಾಳು, 1 ಕೆಜಿ ಕಡಲೆ ಬೀಜ (ಶೇಂಗಾ), 3 ಕೆಜಿ ಹೆಸರು ಕಾಳು ಅಥವಾ ಹುರುಳಿ ಕಾಳು ಅಥವಾ ಅಲಸಂದೆ ಕಾಳು, 2 ಲಿಟರ್ ಎಣ್ಣೆ, 2 ಕೆಜಿ ಸಕ್ಕರೆ ಅಥವಾ ಬೆಲ್ಲ, ತಿಂಗಳಿಗೆ 30 ಮೊಟ್ಟೆ, ಅರ್ಧ ಕೆಜಿ ನಂದಿನಿ ತುಪ್ಪ ತಲುಪಿಸಬೇಕಾಗುತ್ತದೆ.
ರಾಜ್ಯದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು, ಉತ್ತರ ಕನ್ನಡ, ಚಾಮರಾಜನಗರ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಈ ಯೋಜನೆ ಜಾರಿಯಲ್ಲಿದ್ದು, ವಿವಿಧ 12 ಬುಡಕಟ್ಟು ಸಮುದಾಯದ 47,859 ಕುಟುಂಬಗಳಿಗೆ ಪ್ರತಿ ತಿಂಗಳೂ ಪೌಷ್ಠಿಕ ಆಹಾರ ತಲುಪಿಸಲಾಗುತ್ತಿದೆ ಎನ್ನುತ್ತದೆ ಸರ್ಕಾರಿ ಮಾಹಿತಿ.
ಕೊಡಗಿನಲ್ಲಿ ಜೇನುಕುರುಬ ಸಮುದಾಯದ 3,123, ಕಾಡು ಕುರುಬ ಸಮುದಾಯದ 500, ಸೋಲಿಗ ಸಮುದಾಯದ 200, ಎರವ ಸಮುದಾಯದ 3,200, ಮಲೆ ಕುಡಿಯ ಸಮುದಾಯದ 600, ಕುಡಿಯ ಸಮುದಾಯದ 400 ಹಾಗೂ ಬೆಟ್ಟಕುರುಬ ಸಮುದಾಯದ 378 ಕುಟುಂಬಗಳು ಸೇರಿದಂತೆ 8,401 ಕುಟುಂಬಗಳು ಈ ಯೋಜನೆಯ ಫಲಾನುಭವಿಗಳಾಗಿವೆ.
ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯು ಅಧಿಕಾರಿಗಳ ಕಟ್ಟುನಿಟ್ಟಿನ ನಿಗಾದ ಮಧ್ಯೆಯೂ ಪೌಷ್ಠಿಕ ಆಹಾರ ಪೂರೈಕೆ ಗುತ್ತಿಗೆದಾರರ ಮೋಸದಿಂದಾಗಿ ಕೊಡಗಿನಲ್ಲಿ ದಾರಿ ತಪ್ಪಿದಂತಿದೆ. ಬುಡಕಟ್ಟು ಸಮುದಾಯಕ್ಕೆ ಪೂರೈಕೆ ಆಗುತ್ತಿರುವ ಆಹಾರ ಪದಾರ್ಥಗಳು ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಫಲಾನುಭವಿಗಳು ಆರೋಪಿಸುತ್ತಿದ್ದಾರೆ. ಹೊಸ ಗುತ್ತಿಗೆದಾರ ತನ್ನ ಕೆಲಸ ಆರಂಭಿಸಿದ ಆರಂಭದ ತಿಂಗಳುಗಳಲ್ಲಿ ಉತ್ತಮ ಗುಣಮಟ್ಟದ ಪೌಷ್ಠಿಕ ಆಹಾರಗಳು ಫಲಾನುಭವಿಗಳನ್ನು ತಲುಪಿದೆ. ಆದರೆ ಬರ ಬರುತ್ತಾ ಈಗ ಕಳಪೆ ಪದಾರ್ಥ ಕೊಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿದೆ.
ಅಕ್ಕಿ ಒಂದೊAದು ಚೀಲದಲ್ಲಿ ಒಂದೊAದು ರೀತಿ ಇರುತ್ತದೆ. ಕೆಲವರಿಗೆ ಉತ್ತಮ ಗುಣಮಟ್ಟದ ಅಕ್ಕಿ ಸಿಕ್ಕಿದರೆ, ಮತ್ತೆ ಕೆಲವರಿಗೆ ತಿನ್ನಲಾಗದ ಸ್ಥಿತಿಯಲ್ಲಿರುವ ಅಕ್ಕಿ ಕೊಡಲಾಗುತ್ತಿದೆ. ಬೇಳೆ, ಕಾಳುಗಳು ಕೂಡ ಸಂಪೂರ್ಣ ಹಾಳಾಗಿರುತ್ತದೆ. ಕಳೆದ ತಿಂಗಳು ಕೊಟ್ಟಿರುವ ಕಡಲೆ ಗುಣಮಟ್ಟ ಚೆನ್ನಾಗಿಲ್ಲದ ಕಾರಣ ಬುಡಕಟ್ಟು ಸಮುದಾಯದ ಮುಖಂಡರು ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿದೆ. ನಂದಿನಿ ತುಪ್ಪ ಕೊಡಬೇಕಿದ್ದಲ್ಲಿ ಕೆಲವೊಮ್ಮೆ ಖಾಸಗಿ ಸಂಸ್ಥೆಯ ತುಪ್ಪ ಪೂರೈಸಲಾಗುತ್ತಿದೆ. ಅಷ್ಟೊಂದು ಹೆಸರು ಇಲ್ಲದ ಸಂಸ್ಥೆಯ ಅಡುಗೆ ಎಣ್ಣೆ ಕೊಡಲಾಗುತ್ತಿದೆ. ಮೊಟ್ಟೆಯ ಗಾತ್ರವೂ ಚಿಕ್ಕದಿರುತ್ತದೆ ಎಂದು ಫಲಾನುಭವಿಗಳು ಆರೋಪ ಮಾಡುತ್ತಾರೆ.
ಬಹುತೇಕ ಕಡೆಗಳಲ್ಲಿ ಈ ಆಹಾರ ಪದಾರ್ಥಗಳು ಫಲಾನುಭವಿಗಳ ಕೈ ತಪ್ಪುತ್ತಿರುವ ಬಗ್ಗೆಯೂ ದೂರುಗಳು ಕೇಳಿಬರುತ್ತಿದೆ. ತಮಗೆ ಸಿಗುವ ಅಕ್ಕಿ ಸೇರಿದಂತೆ ಇತರ ಪದಾರ್ಥಗಳನ್ನು ಹಲವರು ಮಾರಾಟ ಮಾಡುವ ಮೂಲಕ ಸರ್ಕಾರದ ಆಶಯವನ್ನೇ ಮಣ್ಣುಪಾಲು ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಸÀರ್ಕಾರ ಉಚಿತವಾಗಿ ಪೂರೈಸಿದ ಪೌಷ್ಠಿಕ ಆಹಾರ ಪದಾರ್ಥಗಳನ್ನು ಆದಿವಾಸಿಗಳಿಂದ ಕಡಿಮೆ ದರಕ್ಕೆ ಖರೀದಿಸಿ ಬೇರೆಡೆಗೆ ತಲುಪಿಸುವ ಏಜೆಂಟರು ಗಿರಿಜನ ಹಾಡಿಗಳ ಬಳಿ ಹುಟ್ಟಿಕೊಂಡಿದ್ದಾರೆ. ಅಂಗನವಾಡಿಗೆ ಆಹಾರ ವಸ್ತುಗಳು ಪೂರೈಕೆ ಆಗುತ್ತಿದ್ದಂತೆಯೇ ಇವರುಗಳು ಎಚ್ಚೆತ್ತುಕೊಳ್ಳುತ್ತಾರೆ. ಕೂಡಲೇ ಫಲಾನುಭವಿಗಳನ್ನು ಸಂಪರ್ಕಿಸಿ ಅಂಗನವಾಡಿಯಿAದ ಪಡೆದುಕೊಳ್ಳುವ ಆಹಾರ ಪದಾರ್ಥಗಳು ಅವರ ಮನೆ ತಲುಪುವುದಕ್ಕೆ ಮೊದಲೇ ಖರೀದಿಸಿಬಿಡುತ್ತಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಐಟಿಡಿಪಿ ಇಲಾಖೆಯಿಂದ ಫಲಾನುಭವಿಗಳಿಗೆ ಜಾಗೃತಿ ಮೂಡಿಸುವ ಪ್ರಯತ್ನ ಹಲವು ಬಾರಿ ನಡೆಸಲಾಗಿದೆ. ಮಾರಾಟ ಮಾಡಿದರೆ ಆಹಾರ ಕಡಿತದ ಎಚ್ಚರಿಕೆ ನೀಡಲಾಗಿದೆ. ಆದರೂ ಕೆಲವರು ತಮ್ಮ ಚಟ ಮುಂದುವರಿಸಿದ್ದಾರೆ.
ಸರ್ಕಾರ ಜಾರಿ ಮಾಡಿರುವ ಉತ್ತಮ ಯೋಜನೆಗಳಲ್ಲಿ ಇದೂ ಒಂದು. ನಮ್ಮಲ್ಲಿ ನಮಗೆ ಮತ್ತು ಮಗನ ಕುಟುಂಬಕ್ಕೆ ಈ ಸವಲತ್ತು ಸಿಗುತ್ತಿದೆ. ಆದರೆ ನಮಗೆ ಇತ್ತೀಚಿನ ದಿನಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡಲಾಗುತ್ತಿದೆ. ಸಂಬAಧಿಸಿದ ಗುತ್ತಿಗೆದಾರನಿಗೆ ಹಲವು ಬಾರಿ ಈ ಬಗ್ಗೆ ಎಚ್ಚರಿಕೆ ನೀಡಿದ್ದರೂ ಅವರು ಎಚ್ಚೆತ್ತುಕೊಳ್ಳುತ್ತಿಲ್ಲ. ಈ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಸರ್ಕಾರದ ಆಶಯಕ್ಕೆ ಮಣ್ಣೆರುಚುವ ಇಂಥ ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
- ಬಿ.ಬಿ. ಮಹೇಶ್, ಜಿಲ್ಲಾಧ್ಯಕ್ಷ, ಸೋಲಿಗ ಸಮುದಾಯ, ಕೊಡಗು
ಕಳಪೆ ಆಹಾರ ಪದಾರ್ಥ ಪೂರೈಕೆ ನಮ್ಮ ಗಮನಕ್ಕೆ ಬಂದ ಕೂಡಲೇ ಕ್ರಮ ತೆಗೆದುಕೊಳ್ಳಲಾಗಿದೆ. ಅಂಥ ಪದಾರ್ಥಗಳನ್ನು ಬದಲಾಯಿಸಿ ಕೊಡಲಾಗಿದೆ. ಈ ಸಂಬAಧ ಗುತ್ತಿಗೆದಾರನಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಾವು ಕೂಡ ಸಂಪೂರ್ಣ ನಿಗಾವಹಿಸಿದ್ದೇವೆ. ಪೂರೈಕೆ ಆಗುವ ಆಹಾರ ಪದಾರ್ಥಗಳು ಆಹಾರ ಇಲಾಖೆಯಿಂದಲೇ ದೃಢೀಕರಣ ಆಗಬೇಕು.
ಹೊನ್ನೇಗೌಡ, ಜಿಲ್ಲಾ ಅಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ (ಐಟಿಡಿಪಿ)