ಜಲಮೂಲಗಳ ಪುನಶ್ಚೇತನಕ್ಕೆ ಬೆಂಗಳೂರು ಜಲಮಂಡಳಿಯಿಂದ 'ತ್ರಿಬ್ಬಲ್‌ ಆರ್‌' ಜನಾಂದೋಲನ

BWSSB-1-2
Published on

ಬೆಂಗಳೂರು: ನಗರದ ಜಲಮೂಲಗಳನ್ನು ಪುನಶ್ಚೇತನಗೊಳಿಸುವ ಮೂಲಕ ಬೆಂಗಳೂರು ನಗರವನ್ನು 2026 ಜುಲೈ ಒಳಗಾಗಿ ವಾಟರ್‌ ಸರ್‌ಪ್ಲಸ್‌ ಮಾಡುವ ನಿಟ್ಟಿನಲ್ಲಿ ಜಲಮಂಡಳಿ ವತಿಯಿಂದ 'ತ್ರಿಬ್ಬಲ್‌ ಆರ್‌'(ರಿವೈವಲ್‌ ರಿಚಾರ್ಜಿಂಗ್‌ ರೈನ್‌ ವಾಟರ್‌) ಜನಾಂದೋಲನ ಆರಂಭಿಸಲಾಗುವುದು. ಈ ಜನಾಂದೋಲನಕ್ಕೆ ನಾಗರೀಕರು ಹೆಚ್ಚಿನ ಪ್ರಮಾಣದಲ್ಲಿ ಕೈ ಜೋಡಿಸುವಂತೆ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌ ಕರೆ ನೀಡಿದ್ದಾರೆ.

ನಗರದ ಅರ್ಕಾವತಿ ಮತ್ತು ವೃಷಭಾವತಿ ನದಿ ಪಾತ್ರದ ಪರಿಶೀಲನೆ ನಡೆಸಿ ಬುಧವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಅರ್ಕಾವತಿ ಮತ್ತು ವೃಷಭಾವತಿ ನದಿಗಳ ಪುನಶ್ಚೇತನ:

ಅರ್ಕಾವತಿ ಮತ್ತು ವೃಷಭಾವತಿ ನದಿಗಳ ಪಾತ್ರದಲ್ಲಿ ಬಹಳಷ್ಟು ಒತ್ತುವರಿಯಾಗಿದ್ದು, ನೀರಿನ ಸಮರ್ಪಕ ಹರಿವಿಗೆ ತೊಂದರೆಯಾಗಿದೆ. ಈ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ನೀರಿನ ಸರಾಗ ಹರಿವಿಗೆ ಅನುವು ಮಾಡಿಕೊಡುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಾಗರೀಕರ ಪಾತ್ರ ಬಹಳ ಮುಖ್ಯವಾಗಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪುನರುಜ್ಜೀವನಕ್ಕೆ ಕೈಜೋಡಿಸಬೇಕು ಎಂದು ತಿಳಿಸಿದರು.

ರಿಚಾರ್ಚಿಂಗ್‌ ಆಫ್ ರೈನ್‌ ವಾಟರ್​ಗೆ ಪ್ರೋತ್ಸಾಹ:

ಮಳೆ ನೀರು ಕೊಯ್ಲು ಹಾಗೂ ಅದರ ಮರುಪೂರಣ ಕಡ್ಡಾಯಗೊಳಿಸಲಾಗಿದೆ. ಆದರೆ, ಬಹುಪಾಲು ಜನರು ತಮ್ಮ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ಅಳವಡಿಸಿದ್ದರೂ ಅದನ್ನು ಮರುಪೂರಣ ಮಾಡುವ ವ್ಯವಸ್ಥೆ ಕಲ್ಪಿಸಿಲ್ಲ. ಸಮರ್ಪಕವಾಗಿ ಮಳೆ ನೀರು ಕೊಯ್ಲು ಪದ್ದತಿಯನ್ನು ಅಳವಡಿಸಿಕೊಂಡಿರುವಂತಹ ಹಾಗೂ ಆ ನೀರಿನ ಸದ್ಬಳಕೆ (ಮರುಪೂರಣ ಅಥವಾ ಬಳಕೆ) ಮಾಡಲು ವ್ಯವಸ್ಥೆ ಮಾಡಿರುವಂತಹ ಜನರಿಗೆ ಜಲಮಂಡಳಿ ಪ್ರೋತ್ಸಾಹ ನೀಡಲಿದೆ. ಇದರ ಭಾಗವಾಗಿ "ಹೆಮ್ಮೆಯ ಬೆಂಗಳೂರು ನಾಗರೀಕ" ಎನ್ನುವ ಅಭಿಯಾನ ನಡೆಸಲಾಗುವುದು. ಈ ಅಭಿಯಾನದ ಮೂಲಕ ಸಮರ್ಪಕವಾಗಿ ರೈನ್‌ ವಾಟರ್‌ ರಿಚಾರ್ಜಿಂಗ್‌ ಅಳವಡಿಸಿಕೊಂಡಿರುವ ಕಟ್ಟಡಗಳ ಮೇಲೆ ಜಲಮಂಡಳಿಯ ವತಿಯಿಂದ ನಮ್ಮ "ಹೆಮ್ಮೆಯ ಬೆಂಗಳೂರು ನಾಗರೀಕ" ಎನ್ನುವ ಭಿತ್ತಿಪತ್ರವನ್ನು (ಸ್ಟಿಕ್ಕರ್‌) ಅಂಟಿಸಲಾಗುವುದು ಹಾಗೂ ಅವರ ನೀರಿನ ಬಿಲ್‌ನಲ್ಲೂ ಹೆಮ್ಮೆಯ ಬೆಂಗಳೂರು ನಾಗರೀಕ ಎನ್ನುವುದನ್ನು ನಮೂದಿಸಲಾಗುವುದು. ಮುಂದಿನ ದಿನಗಳಲ್ಲಿ ಈ ಕಟ್ಟಡಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲೂ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.

ನಗರದ 185 ಕೆರೆಗಳ ರಿಜ್ಯೂವಿನೇಷನ್‌:

ನಗರದಲ್ಲಿರುವ ಕೆರೆಗಳನ್ನು ಪುನಃಶ್ಚೇತನಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಾಗಿದೆ. ಈಗಾಗಲೇ 15ಕ್ಕೂ ಹೆಚ್ಚು ಕೆರೆಗಳನ್ನು ಸಂಸ್ಕರಿಸಿದ ನೀರಿನಿಂದ ತುಂಬಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರದ ವ್ಯಾಪ್ತಿಯಲ್ಲಿರುವ 185 ಕೆರೆಗಳನ್ನು ಪುನಃಶ್ಚೇತನಗೊಳಿಸುವುದು ಜಲಮಂಡಳಿಯ ಗುರಿಯಾಗಿದೆ. ಅವುಗಳಲ್ಲಿನ ಹೂಳು ತೆಗೆಯುವುದು, ಉತ್ತಮ ನೀರನ್ನು ತುಂಬಿಸುವುದು ಈ ಮೂಲಕ ಅಂತರ್ಜಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net