

ಗೋಣಿಕೊಪ್ಪ: ಆದಿವಾಸಿ ಬುಡಕಟ್ಟು ಜನಾಂಗವನ್ನು ರಕ್ಷಣೆ ಮಾಡುವುದರೊಂದಿಗೆ ಆದಿವಾಸಿಗಳ ಆಚಾರ- ವಿಚಾರ, ಸಂಸ್ಕೃತಿ ಹಾಗೂ ಜೀವನ ಕ್ರಮಗಳ ಕುರಿತು ಬೆಳಕು ಚೆಲ್ಲುವ ಮೂಲಕ ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ದಿಸೆಯಲ್ಲಿ ಡಿಸೆಂಬರ್‌ನಲ್ಲಿ ರಾಜ್ಯ ಮಟ್ಟದ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳ ಸಮಾವೇಶ ಮಾಡಲು ನಿರ್ಧರಿಸಲಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕೊಡಗು ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ ತಿಳಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕೊಡಗು ಜಿಲ್ಲಾ ಸಂಸ್ಥೆ ಮತ್ತು ಪೊನ್ನಂಪೇಟೆ ಸ್ಥಳೀಯ ಸಂಸ್ಥೆಯ ಸಹಯೋಗದಲ್ಲಿ ಪೊನ್ನಂಪೇಟೆ ಸಮೀಪದ ಮರೂರು-ತಿತಿಮತಿ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಬುಡಕಟ್ಟು ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೊದಲಿಗೆ ಬುಡಕಟ್ಟು ಜನಾಂಗದವರಿಂದಲೇ ಪ್ರಾರಂಭಗೊಂಡ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಇಂದು ವಿಶ್ವದಾದ್ಯಂತ ಚಟುವಟಿಕೆ ಗಳು ಪಸರಿಸಿವೆ. ಈ ದಿಸೆಯಲ್ಲಿ ಬುಡಕಟ್ಟು ಸಮುದಾಯದವರ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಈ ಸಮಾವೇಶ ಸಹಕಾರಿಯಾಗಲಿದೆ ಎಂದರು.
ವಿದ್ಯಾರ್ಥಿಗಳು ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಸ್ಥೆಯ ಪ್ರಯೋಜನವನ್ನು ಪಡೆದುಕೊಂಡು ಉತ್ತಮ ಶಿಕ್ಷಣ ಹೊಂದುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬುಡಕಟ್ಟು ದಿನಾಚರಣೆ ಕುರಿತು ಮಾಹಿತಿ ನೀಡಿದ ಜಿಲ್ಲಾ ಸ್ಕೌಟ್ಸ್ ವಿಭಾಗದ ಆಯುಕ್ತ ಜಿಮ್ಮಿ ಸಿಕ್ವೇರಾ, ಕಾಡಂಚಿನಲ್ಲಿ ನೆಲಸಿ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವ ಬುಡಕಟ್ಟು ಸಮುದಾಯದವರು ಪ್ರಕೃತಿ ಪ್ರಿಯರು. ವಿಶಿಷ್ಟ ಸಂಸ್ಕೃತಿ ಹೊಂದಿರುವ ಬುಡಕಟ್ಟು ಸಮುದಾಯದದವರ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ ಎಂದರು.
ಸಂಸ್ಥೆಯ ಸ್ಥಳೀಯ ಅಧ್ಯಕ್ಷ ಕಾಳೀಮಾಡ ಮೋಟಯ್ಯ ಮಾತನಾಡಿ, ಬುಡಕಟ್ಟು ಜನಾಂಗದವರು ಉತ್ತಮ ಶಿಕ್ಷಣ ಪಡೆದರೆ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.
ಸಂಸ್ಥೆಯ ಸ್ಥಳೀಯ ಉಪಾಧ್ಯಕ್ಷ ಜಿಮ್ಮಿ ಅಯ್ಯಣ್ಣ, ಬುಡಕಟ್ಟು ಜನಾಂಗದ ಆಚಾರ- ವಿಚಾರ, ಸಂಪ್ರದಾಯ, ಸಂಸ್ಕೃತಿ, ಆಹಾರ ಪದ್ಧತಿ ಹಾಗೂ ಜೀವನ ಕ್ರಮದ ಕುರಿತು ವಿವರಿಸಿದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಜಿಲ್ಲಾ ಗೈಡ್ಸ್ ಸಂಸ್ಥೆಯ ಆಯುಕ್ತೆ ರಾಣಿ ಮಾಚಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಶಾಲೆ ಮುಖ್ಯ ಶಿಕ್ಷಕ ಸಿದ್ದಯ್ಯ ಶೆಟ್ಟಿ ದಿನದ ಮಹತ್ವದ ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ಸಹ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ಜಿಲ್ಲಾ ತರಬೇತಿ ಆಯುಕ್ತ ಕೆ.ಯು.ರಂಜಿತ್, ಗೈಡ್ಸ್ ನ ಜಿಲ್ಲಾ ಸಹಾಯಕ ಆಯುಕ್ತೆ ಸಿ.ಎಂ. ಸುಲೋಚನಾ ಇತರರು ಇದ್ದರು.